Wednesday, January 27, 2010

ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕಂ | ೫೦೦ ವರ್ಷ ಸಂಪೂರ್ಣಂ ||








ಕರ್ನಾಟಕತ ಇತಿಹಾಸದ ಪುಟಗಳನ್ನು ತಿರುವು ಹಾಕಿದರೆ ಕದಂಬ, ಚಾಲುಕ್ಯ, ಚೋಳ, ಹೋಯ್ಸಳ, ಮೈಸೂರಿನ ಸಾಮ್ರಾಜ್ಯಗಳು ಕರುನಾಡನ್ನು ಆಳಿರುವುದಾಗಿ ಕಂಡುಬರುತ್ತದೆ. ಕರುನಾಡನ್ನು ಅನೇಕ ವರ್ಷಗಳ ತನಕ ಆಳಿದ ಮತ್ತೊಂದು ಪ್ರಮುಖ ಸಾಮ್ರಾಜ್ಯವೆಂದರೆ, ಅದುವೇ ವಿಜಯನಗರ ಸಾಮ್ರಾಜ್ಯ. ವಿಜಯನಗರ ಸಾಮ್ರಾಜ್ಯವನ್ನು ಹಕ್ಕ-ಬುಕ್ಕ ಸಹೋದರರು ವಿದ್ಯಾರಣ್ಯ ಋಷಿಗಳ ಸಲಹೆಯ ಆಶ್ರಯದಲ್ಲಿ ಸ್ಥಾಪಿಸಿದರು.


ಸ್ಥಾಪನೆಯ ಸಂಧರ್ಭದಲ್ಲಿ ನಡೆದ ಒಂದು ಘಟನೆ ಪ್ರತೀತಿಯಲ್ಲಿದೆ. ಅದನ್ನು ಇಲ್ಲಿ ಹೇಳಬಯಸುತ್ತೇನೆ. ವಿದ್ಯಾರಣ್ಯರು ಹಕ್ಕ-ಬುಕ್ಕರೊಡನೆ ರಾಜ್ಯದ ಸ್ಥಾಪನೆಗೆ ಪ್ರಶಸ್ತವಾದ ಜಾಗವನ್ನು ಹುಡುಕುವಾಗ ಮೊಲವೊಂದು ನಾಯನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವುದನ್ನು ಕಂಡರು. ಇಂತಹ ಜಾಗವು ಗಂಡುಮೆಟ್ಟಿನ ನಾಡೇ ಇರಬೇಕೆಂದು ತೀರ್ಮಾನಿಸಿ, ನಕ್ಷತ್ರ-ಸಮಯ-ಘಳಿಗೆಯೆಲ್ಲವನ್ನೂ ಪರಿಶೀಲಿಸಿದ ನಂತರ, ತಮ್ಮ ಕನಸಿನ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದರು.

ಸಂಗಮ, ಸಳುವ, ತುಳುವ, ಅರವಿಡು ಸಂಸ್ಥಾನಗಳು ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಬರುತ್ತವೆ. ಈ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ರಾಜನೆಂದರೆ ಶ್ರೀಕೃಷ್ಣದೇವರಾಯ. ’ಕನ್ನಡರಾಜ್ಯರಮಾರಮಣ’ವೆಂಬ ಬಿರುದು ಈ ವಿಖ್ಯಾತ ಅರಸನ ಪಾಲಾಗಿದೆ. ಇಂದಿಗೆ ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕವಾಗಿ ೫೦೦ ವರ್ಷಗಳು ಸಂದಿವೆ! ಜಗದೊಡೆಯ ಶ್ರೀಕೃಷ್ಣನ ಜನುಮದಿನದಂದು ಜನರ‍ೊಡೆಯ ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕವು ನಡೆಯಿತೆಂಬ ಮಾತು ಚಾಲ್ತಿಯಲ್ಲಿದೆ.



ಶ್ರೀಕೃಷ್ಣದೇವರಾಯರ ಆಳ್ವಿಕೆಯಲ್ಲಿ ಸಾಹಿತ್ಯ, ಸಂಗೀತ, ರಾಜ್ಯದ ಸುಭದ್ರತೆ, ಕಲೆ, ಜನರ ನಡುವಿನ ಶಾಂತಿ-ಸಮನ್ವಯತೆ ಯಥೇಚ್ಛವಾಗಿ ಬೆಳೆಯಿತು. ಈ ಮಾತು ಎಷ್ಟು ನಿಜವೆಂದರೆ ಈಗಿನ ಜನ ’ಶ್ರೀಕೃಷ್ಣದೇವರಾಯನ ಕಾಲದಲ್ಲಿ ಚಿನ್ನವನ್ನು ನಿರ್ಭಯವಾಗಿ ತಳ್ಳುವ ಗಾಡಿಯಲ್ಲಿ, ರಸ್ತೆಯ ಬದಿಯಲ್ಲಿ ಮಾರಾಟ ಮಾಡುತ್ತಿದ್ದರು’ ಎಂದು ಮಾತನಾಡಿಕೊಳ್ಳುತ್ತಾರೆ!

ಶ್ರೀಕೃಷ್ಣದೇವರಾಯ ಜನರ ಮೇಲೆ ಯಾವುದೇ ಜಾತಿ-ಮತದ ನಿರ್ಭಂದನೆ ಏರದಿರುವುದು ಮತ್ತೊಂದು ಗಮನೀಯ ಅಂಶ. ಅಧಿಕಾರವು ಧರ್ಮದ  ಚೌಕಟ್ಟಿನೊಳಗೆ ಇರಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ಅಲ್ಲದೇ, ತಮ್ಮ ರಾಜ್ಯದ ಜನರ ಆಗು-ಹೋಗುಗಳನ್ನು ತಿಳಿಯಲು ಮಾರುವೇಷದಲ್ಲಿ ಅನೇಕ ಬಾರಿ ಜನರೊಡನೆ ಬೆರೆಯುತ್ತಿದ್ದರು. ’ಅಮುಕ್ತಮಲ್ಯಡ’ವೆಂಬ  ಗ್ರಂಥವನ್ನು ತೆಲುಗು ಭಾಷೆಯಲ್ಲಿ ರಚಿಸಿ, ಇದರಲ್ಲಿ ಭಕ್ತೆ ಆಂಡಾಳ್ ವಿಷ್ಣು ಭಗವಂತನ ಬೇರ್ಪಡುಗೆಯಿಂದ ಪಡುವ ಸಂಕಟವನ್ನು ಅದ್ಭುತವಾಗಿ ವರ್ಣಿಸಿದ್ದಾರೆ.

ಇಂತಹ ಜನನಾಯಕನ ಆದರ್ಶ, ಸಾಧನೆಗಳಿಂದ ನಮ್ಮ ಇಂದಿನ ’ಧನ’ನಾಯಕರು ಪಾಠ ಕಲಿಯಲೆಂದು ಆಶಿಸುತ್ತೇನೆ. ಶ್ರೀಕೃಷ್ಣದೇವರಾಯರ ಹೆಸರು ಕರುನಾಡ ಇತಿಹಾಸದ ಪುಟಗಳಲ್ಲಿ, ಕನ್ನಡಿಗರ ಎದೆಯಲ್ಲಿ ಅಜರಾಮರವಾಗಲಿ! (ಶ್ರೀಕೃಷ್ಣದೇವರಾಯರ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿಯಬೇಕಾದಲ್ಲಿ ಬಿ.ಆರ್.ಪಂತಲು ಅವರ ಡಾ|ರಾಜ್‍ಕುಮಾರ್ ನಟನೆಯ ’ಶ್ರೀಕೃಷ್ಣದೇವರಾಯ’ ಚಲನಚಿತ್ರವನ್ನು ವೀಕ್ಷಿಸಿ.)

2 comments:

  1. Krishnadevaraya though his mother tongue was telugu he has ruled the souther empire and his period was considered as the golden period of South indian history! its is not an exaggeration as we can quote from the books of forighn travellors Barbosa, Nicolo Conti and many there was no poverty or suffering in his rule he was broad minded and was a poet himself and authored books both in telugu n Sanskrit, he gave utmost importance for literature. Poo Thanks for a nice writing on Shri krishnadearaya and most importantly i liked d mention about Pantalu's Movie, hats off to the entire crew n not to forget the lead role Dr Raj kumar an director Panthalu !

    ReplyDelete
  2. should read about Barbosa and Nicolo Conti someday. thanks for the review :)

    ReplyDelete