Saturday, April 10, 2010

ಶಬರಿ ಶಾರದೆ- Shabari Shaarade

(Press Ctrl+ for an increase in font size) 
ನಮಸ್ಕಾರ್ರಿ. ನಾನು ರಾಮಯ್ಯ ಅಂತ ಹೇಳಿ. ’ಹೋಳಿಗೆ ರಾಮಯ್ಯ’ ಅಂತ ಹೇಳಿದ್ರೆ ಸಾಕು, ನನ್ನ ಗುರ್ತು ಇರೋ ಯಾರಾದ್ರೂ ಸರಿ, ನಿಮಗೆ ನನ್ನ ಕಿರು ಪರಿಚಯ ಸಲೀಸಾಗಿ ಮಾಡೇ ಮಾಡ್ತಾರೆ. ಹೌದ್ರಿ, ಒಂದು ಸಮಯದಲ್ಲಿ ನಾನೊಬ್ಬ ಅಡುಗೆ ಭಟ್ಟ. ನಾಲ್ಕು ವರ್ಷಗಳ ಹಿಂದೆ, ಈ ಚಾಕ್ರಿಗೆ ನಮಸ್ಕಾರ ಹೇಳೋ ಸಂದರ್ಭ ಒಕ್ಕರಿಸ್ತು. ಈ ಜೀವನಾನೂ ಒಂದು ಚಾಕ್ರಿ ಅಂತ ಲೆಕ್ಕಕ್ಕೆ ತಗೊಂಡ್ರೆ, ಸರಿ- ಆ ಚಾಕ್ರಿಗೂ ತಿಲಾಂಜಲಿ ಕೊಟ್ಟೆ! "ಏನಿದು? ಈ ’ಹೋಳಿಗೆ ರಾಮಯ್ಯ’ ವಿಚಿತ್ರವಾಗಿ ಮಾತಾಡ್‍ತಾವ್ನೆ ಅಂದುಕೊಂಡ್ರಾ!?" ಹಾಗೇನು ತಪ್ಪು ತಿಳ್ಕೊಬೇಡ್ರಿ. ವಿಷಯ ಏನಂದ್ರೆ, ನನ್ನ ಮರಣವಾಗಿ ನಾಲ್ಕು ವರ್ಷ ಆಯ್ತು! ಯಾವ್ದೋ ಒಂದು ಮದುವೇಲಿ, ಈ ’ಹೋಳಿಗೆ ರಾಮಯ್ಯ’ ಹೋಳಿಗೆ ಮಾಡ್ತಾ ಮಾಡ್ತಾ ಹೃದಯಾಘಾತದಿಂದ ತೀರ‍್ಕೋಬೇಕಾಗಿ ಬಂತು. ಇದ್ರಿಂದ ನಂಗೇನು ಬೇಸರ ಇಲ್ರಿ, ಯಾಕಂದ್ರೆ ಎಲ್ರೂ ಒಂದಲ್ಲ ಒಂದಿನ ಸತ್ತೇ ಸಾಯ್ಬೇಕು. ಆದ್ರೆ ಈ ಹಾಳು ಜನನ್ ನೋಡಿ- ಶುಭಕಾರ್ಯದ ಸಮಯದಲ್ಲಿ ಅಮಂಗಳ ನಡೀತು ಅಂತ, ಹುಡುಗನ ಕಡೇವ್ರು ಮದುವೇನ ನಿಲ್ಸೇ ಬಿಡೋದೇ?! ಇದ್ರಿಂದಾಗಿ, ಈ ’ಹೋಳಿಗೆ ರಾಮಯ್ಯ’ನ ಕಡೇ ಅಡುಗೆ ನಾಯ್ನರಿಗಳ ಪಲಾಗ ಬೇಕಾಯ್ತು!


ಅದೆಲ್ಲ ಇರ‍್ಲಿ ಬಿಡಿ. ನಾನೀಗ ಮೈಸೂರಿನ ಸರಸ್ವತಿಪುರದ ವಠಾರ ಒಂದರಲ್ಲಿ ವಾಸ ಮಾಡ್ತೀನಿ. ಗಾಬ್ರಿ ಏನ್ ಆಗ್ಬೇಡ್ರಿ! ಇದೇನ್ ದಯ್ಯದ ಕಥೆ ಅಲ್ಲ. ನಾನು ವಾಸ್ತವದಲ್ಲಿ ಕಣ್ಮರೆಯಾಗಿರ‍್ಬೋದು. ಆದ್ರೆ ಮರಣ ಕೇವಲ ಶಾರೀರಿಕ, ಅಲ್ವೇ? ನನ್ನ ಆತ್ಮ-ಚೇತನ ಸದಾ ನನ್ನ ಮನೆಯಲ್ಲಿ, ನನ್ನ ಪರಿವಾರದೊಟ್ಟಿಗೇ ಇರ‍್ತದೆ. ಪರಿವಾರ ಅಂದ್ರೆ, ಏನ್ ಒಂದು ದೊಡ್ಡ ಕುಟುಂಬ ಅಂತ ಅಂದಾಜು ಮಾಡ್ಬೇಡಿ. ಪರಿವಾರ ಅಂದ್ರೆ ಪುಟ್ಟ ಸಂಸಾರ- ನನ್ನಾಕಿ ಕಾವೇರಮ್ಮ ಮತ್ತು ನನ್ ಮೊಮ್ಮಗಳು ಶಾರದೆ, ಅಷ್ಟೇ! ಮುದ್ದಾದ ಸಂಸಾರ ಇತ್ರೀ ಅದು. ಬಡತನ ಇದ್ರೂ ತೃಪ್ತಿಯಿಂದ ಒಕ್ಕಲುತನ ಮಾಡೋ ಹೆಂಡ್ತಿ, ನಾಜೂಕಾಗಿ ಹೇಳಿದ್‍ಹಾಗೆ ಕೇಳೋ ಹೆಣ್ಮಗಿ- ಒಂದು ಗಂಡ್ಸಿಗೆ ಮತ್ತಿನ್ನೇನ್ ಬೇಕ್ ಹೇಳ್ರೀ!? ಪ್ರೀತಿಯ ಸಿರಿತನ ಇರೋ ಸಂಸಾರದಲ್ಲಿ ಬಾಳು ಎಷ್ಟು ಹಿಗ್ತದೆ ಅಂದ್ರೆ, ಬಡತನದ ಹಸಿವೂ ಕೂಡ ನಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ. ಇದು ದಿಟ, ನನ್ನ ನಂಬಿ!


ಮೈಸೂರಿಗೆ ಬಂದ ಹೊಸದ್ರಲ್ಲಿ ಎಲ್ರೂ "ಯಾಕೋ ರಾಮಯ್ಯ? ಬೇರೆ ಯಾರೂ ಸಿಗ್ಲಿಲ್ವ ಕಟ್ಕೊಳಕ್ಕೆ?! ಅಡುಗೆ ಮಾಡ್ತಾ ಮಾಡ್ತಾ ನಿನ್ನ ಬುದ್ಧಿ ಎಲ್ ಹೊಯ್ತೋ? ಹೋಗಿ ಹೋಗಿ ಈ ಕುರುಡೀನ ಗಂಟು ಹಾಕ್ಕೊಂಡಿದ್ಯಲ್ಲೋ!?" ಅಂತಿದ್ರು. ಏನು? ನೀವು ಅದೇ ಪ್ರಶ್ನೆ ಕೇಳ್ತಿದ್ದೀರಾ?! ಇದ್ರಲ್ಲಿ ಆಶ್ಚರ್ಯ ಏನಿಲ್ಲ ಬಿಡಿ. ಆಕಿ ಕುರುಡಿ ಆದ ಹಿನ್ನಲೆ ತಿಳ್ಕೊಂಡ್ರೆ ನಿಮ್ಗೇ ಅರ್ಥ ಆಗ್ತದೆ. ಚೊಕ್ಕದಾಗಿ ಹೇಳ್ತೀನಿ ಕೇಳಿ. ನಾನು ಮೂಲತಃ ಶಿವಮೊಗ್ಗದ ಬಳ್ಳಿಗಾವಿ ಊರಿನವ. ಊರ ಶಾನುಭೋಗರ ಮನೇಲಿ ಹಿಂದಿನಿಂದಲೂ ನಮ್ಮ ವಂಶದವರೇ ಅಡುಗೆ ಭಟ್ಟರು. ಶಾನುಭೋಗರ ಮನೆಯಲ್ಲೇ ನಮ್ಮ ವಾಸ. ಸುಮಾರು ೧೯೫೦ರ ಆಸುಪಾಸಿನ ಸಮಯವದು.  ನಮ್ಮ ತಂದೆಗೆ ನಾನೊಬ್ಬನೇ ಮಗ. ಹಾಗಾಗಿ ಅವರ ಸರದಿಯ ನಂತರ ಅಡುಗೆಯ ಮುಂದಾಳತ್ವ ನನ್ನದೇ ಆಗಿತ್ತು. ಶಾನುಭೊಗರು ಅಂದಮೇಲೆ- ದೊಡ್ಡ ಮನೆ, ೨೦-೩೦ ಮಂದಿಯ ಕುಟುಂಬ, ಕೈಗೆ ಕಾಲ್ಗೆ ಆಳು, ಸುತ್ತು ಮುತ್ತಲಿನ ಊರಿನವರೆಗೂ ಹರಡಿದ ಅಂತಸ್ತು-ಗೌರವ- ಎಲ್ಲಾ ಇತ್ತು. ನಾವು ಬ್ರಾಹ್ಮಣರಾದ್ದರಿಂದ, ಆ ಕಾಲದಲ್ಲಿ ನಮ್ಮ ಸಮುದಾಯದಲ್ಲಿದ್ದಂತಹ ಜಾತಿ-ಮತದ ವಿಕಲ್ಪನೆ-ವೈಚಿತ್ರ್ಯತೆಗಳು ನಮ್ಮಲ್ಲೂ ಇದ್ದವು. ಇಡೀ ಸಮಾಜಾನೇ ಹಾಗಿತ್ತು ಸ್ವಾಮೀ, ಏನ್ಮಾಡೋದು?!  ಇಂತಹ ಸಂದರ್ಭದಲ್ಲಿ ನಾನು ನನ್ನಾಕಿಯನ್ನು ಮೊದಲು ಊರ ಜಾತ್ರೆಯಲ್ಲಿ ನೋಡ್ದೆ. ಗುರುತು ಮಾತಾಯ್ತು, ಮಾತು ಪರಿಚಯವಾಯ್ತು, ಪರಿಚಯ ಪ್ರೇಮವಾಯ್ತು, ಪ್ರೇಮ ಮದುವೆಯ ನಿಲುವಿನ ತನಕ ಬಂದಿಳೀತು!


ನನ್ನ ತಂದೆ-ತಾಯಿಯರ ಮಾತಿರ‍್ಲಿ, ಇದಕ್ಕೆ ಊರ ಶಾನುಭೋಗರು ಒಪ್ಪಿಯಾರೇ? ಮದುವೆಯ ನಂತರ ಕೀಳು ಜಾತಿಯವಳಾದ ನನ್ನಾಕಿ ನಮ್ಮೊಟ್ಟಿಗೆ ಶಾನುಭೋಗರ ಮನೆಯಲ್ಲಿ ವಾಸಿಸುವ ಸಂಗತಿ ಬಂದರೆ, ಸಮಾಜ ಒಪ್ಪುತ್ತದೆಯೇ? ತಲತಲಾಂತರದಿಂದ ಚಾಲ್ತಿಯಲ್ಲಿರೋ ಪರಂಪರೆಯನ್ನು ಮುಂದುವರಿಸೋ ಸಲುವಾಗಿ ನಮ್ಮ ಪ್ರೇಮಾನ ಬಲಿ ಕೊಡೋದು ತರವೇ? ಅಷ್ಟಕ್ಕೂ ನನ್ನಾಕಿ ಕೀಳು ಜಾತಿಯವಳಾದ್ರೇನು, ಮೇಲು ಜಾತಿಯವಳಾದ್ರೇನು ಸ್ವಾಮೀ? ಅಡುಗೆ ಮಾಡೋವ್ನು ನಾನೇ ಅಲ್ವೇ? ಆಕಿಗೆ ನನ್ನ ಕೈಯ್ಯಾರೆ ಮೂರು ಗಂಟು ಹಾಕಿದ್ರೆ, ನನ್ನ ಕೈರುಚಿ ಏನ್ ಹಾಳಾಗ್ತದೆಯೇ? ಅಥವಾ ಅವಳು ಅಸ್ಪೃಶ್ಯಳಾದ್ರೆ ನಾನ್ ಮಾಡೋ ಅಡುಗೇಲಿ ವಿಷ ಬೆರೆತು ಹೋಗ್ತದೆಯೇ? ಆ ಕಳಬೆರಕೆ, ಕಲುಷಿತ ಸಮಾಜಕ್ಕೆ ಒಂದು ನೆಪ ಬೇಕಿತ್ತಷ್ಟೇ! "ನೋಡು ಕೀಳು ಹುಳುವೇ, ನಿನಗೆ ಆಸೆ ಕಾಣುವ ಹಕ್ಕಿಲ್ಲ. ಒಂದು ವೇಳೆ ಕಂಡರೆ ಮೇಲು ಜಾತಿಯ ಬೃಹತ್-ನಿರ್ದಯಿ ಕಾಲುಗಳು ನಿನ್ನನ್ನು ಹೊಸಕಾಕುತ್ತವೆ" ಎಂದು ಕೂಗಿ ಹೇಳ ಬೇಕಿತ್ತಷ್ಟೇ. ಪ್ರಕಾಶಿತ ಪ್ರೇಮದ ಬೆಳಕಲ್ಲಿ ಕುರುಡಾದ ನಾನು ಸಮಾಜದ ಮಾತಿಗೆ ಒಪ್ಪಲಿಲ್ಲ. ಅದರ ಸಲುವಾಗಿ, ನನ್ನಾಕಿಯನ್ನು ಅಕ್ಷರಶಃ ಕುರುಡು ಮಾಡಿದರು! ಮೂರ್ಛೆ ಹೋಗಿಸಿ, ಬಿಸಿ ಎಣ್ಣೆ ಸುರಿದರು ಕಣ್ಣಿಗೆ! ಪಾಪಿಗಳು, ನೀಚರು. ಅವರ ಜನ್ಮಕ್ಕಿಷ್ಟು!


ನಮ್ಮೂರಲ್ಲಿ ಅಲ್ಲಮ ಪ್ರಭು, ಅಕ್ಮಹಾದೇವಿ ಜನ್ಮಿಸಿ, ಸಮಾಜದ ಸುಧಾರಣೆಗೆ ಸಹಸ್ರಾರು ವರ್ಷಗಳ ಹಿಂದೆಯೇ ಓಡಾಡಿದ್ರಂತೆ. ಏನ್ ವಿಧಿಬರ ನೋಡಿ! ಅವರ ಊರಲ್ಲೇ ಇಂತಹ ಘಟನೆ ನಡೀತು! ಇಂತಹ ದುರ್ಘಟನೆ ನೋಡಿಯೂ ಕೂಡ ನಾನು ಹೇಗೆ ಸುಮ್ಮನಿರಲಾಗ್ತದೆ? ನೀವೇ ಹೇಳಿ! ನನ್ನಾಕಿಯ ಮನೆ ಊರಾಚೆ. ಒಂದು ರಾತ್ರಿ, ಧೈರ್ಯ ಮಾಡಿ ಆಕಿಯನ್ನು ಜೊತೆ ಕರೆದುಕೊಂಡು ಓಡಿದೆ. ಸಿಕ್ಕ ಬಸ್ಸನ್ನು ಹತ್ತಿ ಊರ ತೊರೆದೆವು. ಮುಂಜಾನೆ ಕಣ್ಬಿಟ್ಟಾಗ ಪಟ್ಟಣ ಸೇರಿದ್ವಿ. ನನ್ನಾಕಿ "ಎಲ್ಲಿದೀವ್ರಿ?" ಅಂತ ಕೇಳುದ್ಳು. ಕೂಡಲೆ ದಾರಿಯಲ್ಲಿ ಮೈಸೂರ ಅರಮನೆ ಕಾಣಿಸಿತು. "ಮೈಸೂರಲ್ಲಿ ಇದ್ದೀವೇ. ಈಗ್ ತಾನೆ ಅರಮನೆ ಪಕ್ಕದಾಗೆ ಸರೀತು ಕಣೆ ನನ್ ರಾಣಿ" ಅಂದೆ. ಹೌದು, ಪ್ರೀತಿ ಕುರುಡು!      


ಸರಿ, ಈಗ ಶಾರದೆಯ ವಿಷಯಕ್ಕೆ ಬರೋಣ. ಶಾರದೆ ಅಪ್ಪ ದಿವಾಕರ ಅಂತ- ನನ್ ಮಗ, ಅಮ್ಮ ಪದ್ಮಿನಿ- ನನ್ ಸೊಸೆ. ಇವಳ ಅಪ್ಪ-ಅಮ್ಮ ಶೃಂಗೇರಿಯಿಂದ ವಾಪಾಸ್ ಬರುವಾಗ ರಸ್ತೆ ಅಪಘಾತಕ್ಕೆ ಈಡಾಗಿ ಸತ್ತು ಹೋದ್ರು. ಶಾರದೆ ಆಗಿನ್ನೂ ಒಂದು ವರ್ಷದ ಕೂಸು. ಆದ್ರೆ ಯಾಕೋ ಅವಾಗ್ಗವಾಗ್ಗೆ ಖಾಯಿಲೆ ಬೀಳ್ತಿದ್ಳು. ಸರಿ, ಶೃಂಗೇರಿಗೆ ಹೋಗಿ ಕಾಣಿಕೆ ಕೊಟ್ಟು ಬರ‍ೋಣ- ಎಲ್ಲಾ ಸರಿ ಹೋಗ ಬಹುದೆಂದು ಎಣಿಸಿ ದಿವಾಕರ-ಪದ್ಮಿನಿ ಇಬ್ರೂ ಹೊರಟ್ರು. ವಿಪರ್ಯಾಸ ನೋಡಿ- ತಮ್ಮ ಮಗಳ ಕ್ಷೇಮಕ್ಕಾಗಿ ತಾಯ್ತಂದೆ ಪ್ರಾರ್ಥನೆ ಮಾಡಿ ಹೊರಟ್ರೆ, ಪ್ರತ್ಯುತ್ತರವಾಗಿ ’ಶಾರದೆ’ಯ ಪಾಲಕರನ್ನು ಆ ’ಶಾರದಾಂಬೆ’ ಕಸಿದುಕೊಳ್ಳೋದೇ?! ಇದ್ಯಾವ ನ್ಯಾಯಾರೀ!? ಇದ್ರಿಂದಾಗಿ ನನ್ನ, ನನ್ನಾಕಿಯ ಶಾರದೆಯ ಮೇಲಿನ ಪ್ರೀತಿಯಲ್ಲಿ ಬದಲಾವಣೆಯೇನೂ ಆಗ್ಲಿಲ್ಲ. ಅಕ್ಕರೆ-ಹಾರೈಕೆ ಎಂದಿನಂತೆ ನಡೆಯಿತು. ಯಾಕಂದ್ರೆ, ನೋಡಿ- ಸಂಬಂಧ ಅನ್ನೋದು ಸಂಗತಿಗಳ ಮಾರ್ಪಾಟುಗಳ ಜಟಿಲತೆ-ಅನಿರೀಕ್ಷಿತೆಗಳಿಂದ ಬಹು ದೂರವಿರುವ ಅಮೂಲ್ಯವಾದ ನಂಟು. ಲೋಕದ ದೃಷ್ಟಿಯಲ್ಲಿ ಮಾತ್ರ, ನಾವು ಅಜ್ಜ-ಅಜ್ಜಿ ಅಲ್ಲದೇ ಅಪ್ಪ-ಅಮ್ಮ ಕೂಡ ಆದೆವು, ಅಷ್ಟೇ!


ನಾನು ಬದುಕಿರುವ ತನಕ ಶಾರದೆಯ ಲಾಲನೆ-ಪೋಷಣೆಯೇನೋ ಸಲೀಸಾಗಿ ನಡೀತು. ನಾನು ಕಣ್ಮುಚ್ಚಿದಾಗ ಶಾರದೆಗೆ ಇನ್ನೂ ಹದಿನೈದು ವರ್ಷ- ಒಂಬತ್ತನೆ ತರಗತಿಯಲ್ಲಿ ಇದ್ಳು. ನಾನೇನು ಪಾಳೇಗಾರಾನೂ ಅಲ್ಲ-ಸರ್ಕಾರಿ ನೌಕ್ರಾನೂ ಅಲ್ಲ ನೋಡೀ. ಅದ್ಕೆ ನನ್ನ ಸಾವಿನ ನಂತರ ಶಾರದೆಯ ಓದು ಮುಂದುವರಿಸಲೂ  ಕಷ್ಟವಾಯ್ತು. ಹೇಗೋ ನನ್ನಾಕಿ, ಕೂಡಿಟ್ಟ ಅಲ್ಪ-ಸ್ವಲ್ಪ ಕಾಸು ಮತ್ತು ಒಂದಿಷ್ಟು ಸಾಲ ಮಾಡಿ, ಶಾರದೆ ಎಸ್ಸೆಲ್ಸಿ ಮುಗಿಸೋ ತನಕ ಓದ್ಸುದ್ಳು. ಊರ‍್ನಾಗೆ ನಮ್ಮಪ್ಪ ಒಂದಿಷ್ಟು ಆಸ್ತಿ ಮಾಡಿದ್ನಂತೆ. ನಾನು ಬದುಕಿರೋ ತನಕ ಊರ ಕಡೆ ಹೋದವ್ನೂ ಅಲ್ಲ, ಆಸ್ತಿ ಮೇಲೆ ನಂಗೆ ಆಸೇನೂ ಇರ‍್ಲಿಲ್ಲ. ಈಗ ನಮ್ಮ ಸಂಬಂಧಿಕರೇ ಆ ಅಸ್ತಿಗೆ ವಾರಸುದಾರ್ರು. ಈ ಕುರುಡು ಅಜ್ಜಿ ಎಷ್ಟು ದಿನ ಬದುಕಿಯಾಳು? ಆಕಿಗೆ ಕೆಲ್ಸ ಮಾಡೋ ವಯಸ್ಸೂ ಅಲ್ಲ, ಕೆಲ್ಸ ಮಾಡ್ತೀನಿ ಅಂದ್ರೆ- ಹ್ಯಾಗೆ ಮಾಡಿಯಾಳು? ಹೆಣ್ಮಗಿ ಅಂದ್ಮೇಲೆ ಮದುವೆ ಬೇರೆ ಮಾಡ್ಕೊಡ್ಬೇಕು, ಅಲ್ವೇ? ಅದ್ಕೇ ನನ್ನೊಟ್ಟಿಗೆ ಅಡುಗೆ ಭಟ್ಟನಾಗಿದ್ದ ಶ್ಯಾಮಪ್ಪ ಈ ಹೆಣ್ಮಗಿಗೆ ಒಂದು ದಾರಿ ತೋರಿಸೋ ಸಲುವಾಗಿ ಮುಂದೆ ಬಂದವ್ನೆ. ಪುಣ್ಯಾತ್ಮ! ಆಸ್ತೀಲಿ ನಮಗೂ ಪಾಲು ಸಿಗುವಂತೆ ಕೋರ್ಟು-ಕಛೇರಿ ಅಂತ ಒಬ್ಬನೇ ಓಡಾಡ್‍ತಾವ್ನೆ. ಸ್ವಾಭಿಮಾನವೇನೋ ಆಸ್ತಿಗೆ ಒಲ್ಲೆ ಅಂದ್ರೂ, ಮಾನ ಕೇಳ್ಬೇಕಲ್ರೀ?!


ಊರಿಂದ ಹೊರ ಬಂದು ಸುಮಾರು ದಶಕಗಳೇ ಆಯ್ತು. ಆಗ ಸಂಬಂಧಗಳನ್ನೇ ತ್ಯಜಿಸಿ ಓಡಿ ಬಂದಿದ್ವಿ. ನೆನಪಿಸಿಕೊಂಡ್ರೆ ಕರುಳು ಚುರುಕ್ ಅಂತದೆ. ಅಪ್ಪ-ಅವ್ವ ಏನಾದ್ರೋ ಏನೋ ಅಂತ ಎಂದೂ ಕೇಳ್ದವ್ನಲ್ಲ ನಾನು! ಆಗ ಬಿಸಿ ರಕ್ತ ಇತ್ತು. ಅವರ ಬಗ್ಗೆ ಯೋಚನೆ ಇರಲಿ, ಗಮನಕ್ಕೂ ತಗೋಳ್ಲಿಲ್ಲ. ಆದ್ರೆ ಮುಪ್ಪು ಬಂದ್ಮೇಲೆ, ಹೊಟ್ಟೇಲಿ ಹುಟ್ಟಿದ ಮಗ ತೀರ‍್ಕೊಂಡ್ಮೇಲೆ, ನಮ್ಮಪ್ಪ-ಅವ್ವ ನಾನು ಓಡ್ಬಂದ ತರುವಾಯ ಎಷ್ಟು ನೋವು ತಿಂದಿರ್ಬೋದು, ನಾನೆಂತ ಪಾಪಿ ಅಂತ ಮನದಟ್ಟಾಯ್ತು. ಆದ್ರೆ, ಜೀವನ ಅನ್ನೋದೇ ಹಾಗೇ, ಅಲ್ವೇ!? ಕೆಲವೊಮ್ಮೆ, ನಮ್ಮ ನಿರ್ಧಾರಗಳು ನಿಜವಾಗಿಯೂ ಸರಿಯಾಗಿವೆ ಎಂದೆನಿಸುತ್ತದೆ. ಆದ್ರೆ ಅದು ಕ್ಷಣಮಾತ್ರಕ್ಕೆ. ಕಾಲ ಉರುಳಿದಂತೆ, ನಮ್ಮ ನಿರ್ಧಾರ ಸಂಪೂರ್ಣವಾಗಿ ಸರಿಯಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಆಗ ಆ ನಿರ್ಧಾರದ ವಿಚಾರವಾಗಿ ನಾವೇ ಪಶ್ಚಾತ್ತಾಪ ವ್ಯಕ್ತ ಪಡಿಸ್ತೀವಿ. ಆದ್ರೆ ಅನೇಕ ಬಾರಿ, ನಾವು ಅಷ್ಟರಲ್ಲಿ ಎಷ್ಟು ತಡವಾಗಿರ‍್ತೇವೆ-ಈ ಪ್ರಪಂಚ ಎಷ್ಟು ಮುಂದೆ ಹೋಗಿರ‍್ತದೆ ಅಂದ್ರೆ, ನಮ್ಮ ತಪ್ಪನ್ನು ತಿದ್ದಿಕೊಳ್ಳಲೂ ಸಹ ಸಾಧ್ಯವಾಗುವುದಿಲ್ಲ!


ದುರ್ಗತಿ ಏನಂದ್ರೆ, ಶಾರದೆ ಓದನ್ನು ನಿಲ್ಲಿಸಿದಳಷ್ಟೇ ಅಲ್ಲ, ಈಗ ಮನೆಯ ಜವಾಬ್ದಾರಿ ಕೂಡ ಅವಳ ಮೇಲೇ ಇದೆ. ಜೀವನ ನಡೆಸಬೇಕಲ್ಲ ಸ್ವಾಮೀ, ಏನ್ಮಾಡೋದು? ಹೂವು ಮಾರಿ, ಹೊಟ್ಟೆಗೆ ದಾರಿ ಮಾಡ್ಕೋಬೇಕಾಗಿ ಬಂದಿದೆ. ಪಕ್ಕದ ಬೀದಿಯಲ್ಲಿರೋ ಯಶೋದಮ್ಮ ಮನೆಮನೆಗೆ, ಮುಂಜಾನೆ ಪೂಜೆಗೆ ಹೂವು ಮಾರ‍್ತಾಳೆ. ಯಶೋದಮ್ಮ ಸುಮಾರು ವರ್ಷಗಳಿಂದ ಈ ವೃತ್ತಿಯಲ್ಲಿದ್ದಾಳೆ. ಹಾಗಾಗಿಯೇ ಸರಸ್ವತಿಪುರದ ಅನೇಕರು ಈಕೆಯಿಂದಲೇ ಹೂವು ಕೊಳ್ತಾರೆ. ಗಿರಾಕಿಗಳು ಜಾಸ್ತಿಯಿರುವುದರಿಂದ, ಯಶೋದಮ್ಮನ ಅಡಿ ಅನೇಕರು ಕೆಲಸಕ್ಕಿದ್ದಾರೆ. ದಿಕ್ಕುದೋಚದ ಸುಮಾರು ಹೆಣ್ಣುಮಕ್ಕಳಿಗೆ ದಾರಿ ತೋರಿಸಿದ್ದಾಳೆ ಈ ಮಹಾತಾಯಿ. ಶಾರದೆ ಕೂಡ ಅವರಲ್ಲಿ ಒಬ್ಬಳು. ಮುಂಜಾನೆ ನಾಲ್ಕಕ್ಕೆ ಯಶೋದಮ್ಮನಿಂದ ಬಿಡಿ ಹೂವು ತೆಗೆದುಕೊಂಡು, ಹೂವನ್ನು ಕಟ್ಟಿ, ಕೆಲವು ಗಿರಾಕಿಗಳ ಮನೆಗೆ ಹೋಗಿ ಸಮಯಕ್ಕೆ ಸರಿಯಾಗಿ ಹೂವು ಕೊಡುವ ಕೆಲಸ ಶಾರದೆಯದು. ಅಷ್ಟೆ ಅಲ್ಲದೇ, ಸಾಯಂಕಾಲ ಇನ್ನೂ ಸ್ವಲ್ಪ ಬಿಡಿಹೂವು ಕೊಂಡು ಸರಸ್ವತಿಪುರದ ಸರ್ಕಲ್ ಬಳಿ ರಾತ್ರಿ ಏಳರವರೆಗೆ ಕೂತು ಹೂವು ಮಾರ‍್ತಾಳೆ.


ಮನೆಯಲ್ಲಿ, ನನ್ನ ಒಂದು ಫೋಟೋವಿಗೆ ಮೊಳೆ ಹೊಡೆದು ಗೋಡೆಗೆ ನೇತಾಕಿದ್ದಾರೆ. ನನ್ನ ಇರುವಿಕೆ ಇಲ್ಲೇ ಸ್ವಾಮೀ! ಈ ೧೧ ಬೈ ೧೭ ಇಂಚಿನ ಫ್ರೇಮಿಂದಲೇ ಇಡೀ ಲೋಕವನ್ನು ನೋಡ್ತೀನಿ. ನನ್ನ ಲೋಕ ಅಂದ್ರೆ- ನನ್ನ ಪರಿವಾರ. ಶಾರದೆ ಪ್ರತಿ ದಿನ ತನ್ನ ಕೈಯ್ಯಾರೆ ಹೂವು ಕಟ್ಟಿ ಹಾರ ಹಾಕ್ತಾಳೆ, ಕಡ್ಡಿ ಹಚ್ಚಿ ಪೂಜೆ ಮಾಡಿ ಕಣ್ಣೀರಿಡ್ತಾಳೆ. ಆಗ ನನ್ನಾಕಿಯೇ ಶಾರದೆಗೆ ಸಾಂತ್ವನ ನೀಡೋದು. ನನ್ನಾಕಿ ಕುರುಡಿಯಾದ್ರೂ, ಅವಳ ಮನಸ್ಸು ಕುರುಡಲ್ಲ ನೋಡೀ! ಈ ದೃಶ್ಯಾನ ಕಂಡು ಪ್ರತಿ ದಿನವೂ ಸಾಯ್ತೀನಿ ಸ್ವಾಮೀ ನಾನು! ನಾನು ಜೀವನದಲ್ಲಿ ಮಾಡಿದ್ದಾದರೂ ಏನು, ಸಾಧಿಸಿದ್ದಾದರೂ ಏನು? ನನ್ನ ಸಂಸಾರಕ್ಕೆ ಒಂದು ದಾರಿ ಮಾಡದೇ ಕಣ್ಮುಚ್ಚಿದೆ. ಮದುವೆಗೆ ಬಂದ ಹೆಣ್ಮಗಿ ಅವಳು. ಹತ್ತೊಂಬತ್ತು ವರ್ಷ ಈಗ. ಯಾವತ್ತೂ ಯಾವ ವಿಷಯಕ್ಕೊ ತೊಂದರೆ ಕೊಟ್ಟವಳಲ್ಲ. ದೇವರಲ್ಲಿ ಭಕ್ತಿ- ಹಿರಿಯರಲ್ಲಿ ಗೌರವ, ಮಾಡುವ ಕೆಲಸದಲ್ಲಿ ನಾಜೂಕತೆ- ಇಂತವಳಿಗೆ ಈ ವಿಧಿ ಎಂತಹ ಶಿಕ್ಷೆ ಕೊಡ್ತು, ನೋಡಿ! ನಾನು ತೊಟ್ಟಲು ತೂಗಿ, ಹಾಡಿ ಬೆಳೆಸಿದ ಹುಡುಗಿ ಅವಳು. ಇನ್ನು ನನ್ನಾಕಿ- ನನ್ನ ಪ್ರೇಮಿಸಿ ಕುರುಡಿಯಾದಳು, ಈ ಭಟ್ಟ ತರೋ ಪುಡಿಗಾಸಲ್ಲಿ ಪಿಸುಕ್ಕೆನ್ನದೆ ಜೀವನ ನಡೆಸಿದಳು. ಈಕೆಯ ತಪ್ಪಾದರೂ ಏನು ಎಂದೆನ್ನಿಸುತ್ತದೆ!


ನಮ್ಮ ವಠಾರದ ಮಾಲೀಕರ ಮನೆ ಪಕ್ಕದಲ್ಲೇ ಇದೆ. ಅವರಿಗೂ ಒಂದು ಹೆಣ್ಮಗಿ ಇದೆ- ಗೌರಿ ಅಂತ. ನಮ್ಮ ಶಾರದೆ ಆಕೆಯ ಒಟ್ಟಿಗೆ ಆಡಿ ಬೆಳೆದಳು. ಒಬ್ಬಳೇ ಮಗಳೆಂದು ಮುದ್ದಾಗಿ ಸಾಕಿದ್ದಾರೆ. ಮುಂದಿನ ಮಾರ್ಚಿಗೆ ಆಕೆಯ ಮದುವೆ ಗೊತ್ತಾಗಿದೆ. ಮನೆಯಲ್ಲಿ ಮಗಳ ಕೊನೆಯ ದೀಪಾವಳಿಯೆಂದು ಆಗಲೇ ಹೊಸ ಬಟ್ಟೆ ಕೊಂಡಿದ್ದಾರೆ! ನಾನು ಕಣ್ಮುಚ್ಚುವ ಮುನ್ನ ಶಾರದೆಗೆ ಯುಗಾದಿಗೆಂದು ಹೊಸ ಬಟ್ಟೆ ಕೊಡಿಸಿದ್ದಷ್ಟೇ. ಈಗ- ಗೌರಿಯ, ಮತ್ತಿತರ ಹಳೇ ಬಟ್ಟೆಯೇ ಗತಿಯಾಗಿದೆ. ಬಹುಶಃ, ಸುತ್ತಮುತ್ತಲಿನ ಸಡಗರದ ವತಾವರಣವನ್ನು ಕಂಡು, ದೀಪಾವಳಿಗೆ ಹೊಸ ಲಂಗ-ದಾವಣಿ ಕೊಳ್ಳಲೆಂದು ಶಾರದೆಗೂ ಆಸೆಯಾಗಿದೆ. ಆದರೆ ಏನು ಮಾಡಿಯಾಳು? ಸಂಕೋಚ ಅಷ್ಟೇ ಅಲ್ಲ- ಮನೆಯಲ್ಲಿ ಹಣಕಾಸಿಗೆ ಕಷ್ಟವಿರುವಾಗ ಹೇಗೆ ಕೇಳಿಯಾಳು? ಮಿಕ್ಕ ಹಣವೆಲ್ಲಾ ಕೋರ್ಟು-ಕಛೇರಿಗೆ ಖರ್ಚಾಗುತ್ತಿರುವಾಗ, ಸೂಕ್ಷ್ಮ ಸ್ವಭಾವದ ಶಾರದೆ ಹಠ ಮಾಡುವುದಾದರೂ ಉಂಟೇ!? ಅದೆಷ್ಟು ಆಸೆ-ಆಕಾಂಕ್ಷೆಗಳನ್ನು ಇದುವರೆಗೂ ಲೆಕ್ಕಿಸದೇ ನಿರ್ಲಕ್ಷಿಸಿದ್ದಾಳೋ! ಆದರೂ, ಯಾರನ್ನೂ ದೋಷಿಸದೇ ಪ್ರಪಂಚದೆದುರು ನಿಶ್ಚಿಂತೆಯಿಂದ ನಗುತ್ತಾಳೆ. ದೇವರು ಇಂತಹವರನ್ನೇ ಸ್ವಾಮೀ ಪರೀಕ್ಷಿಸೋದು!


ನಮ್ಮ ವಠಾರದಲ್ಲಿ ೪ ಮನೆಗಳಿವೆ. ಕಳೆದ ನಲ್ವತ್ತು ವರ್ಷಗಳಲ್ಲಿ ಅನೇಕರು ಬಂದು ಹೋದರು. ಜೀವನವು ಹಾವು-ಏಣಿಯ ಆಟವಾದರೆ, ಅವರೆಲ್ಲಾ ಏಣಿ ಏರಿ ಮುಂದೆ ಹೋದರು. ನನಗೆ ಯಾವಾಗಲೂ ಹಾವೇ ಸಿಕ್ಕಿತೋ ಏನೋ ಅಥವಾ ನನ್ನ ಆಟದ ಸರದಿ ಬರಲೇ ಇಲ್ಲವೇನೋ. ಬಹುಶಃ, ನಾನು ಆಟಕ್ಕೇ ಇಳಿಯಲಿಲ್ಲವೇನೋ! ಉಳಿದ ಮೂರು ಮನೆಗಳೊಂದರಲ್ಲಿ ಶೇಖರಪ್ಪನ ಕುಟುಂಬವಿದೆ. ಮುಂದಿನ ವರ್ಷ ತನ್ನ ಸರ್ವೀಸ್ ಮುಗಿಸಿ ಬೆಂಗಳೂರಿನಲ್ಲಿರುವ ತನ್ನ ಮಗನ ಮನೆಗೆ ಹೋಗ್ತಾನೆ. ತನ್ನ ಹೆಂಡತಿ ಜಯಮ್ಮನ ತಮ್ಮನ ಮಗ ನಂದೀಶ ನಿನ್ನೆ ಮೈಸೂರಿಗೆ ಬಂದ. ಮುಂದಿನ ತಿಂಗಳು ದಸರಾ ಇದೆ ನೋಡೀ! ಶಾಲೆಯಲ್ಲಿ ರಜೆ ಸಿಕ್ಕಿತೆಂದು ಆಗುಂಬೆಯಿಂದ ಬಂದಿದ್ದಾನೆ.
ಇಲ್ಲಿಂದ ಶುರು ನಮ್ಮ ಕಥೆ!  


ಮುಂಜಾನೆ ನಾಲ್ಕಾಗ್ತಿದ್ದಂತೆ, ನನ್ನಾಕಿ ಶಾರದೇನ ಎಬ್ಬರಿಸೋ ದಿನನಿತ್ಯದ ಕೆಲಸ ಶುರುವಾಗ್ತದೆ. ಶಾರದೆ ಎಂದೂ ಏಳಲಿಕ್ಕೆ ಹಠ ಮಾಡ್ದವ್ಳಲ್ಲ ಬಿಡಿ. ಹೆಸರನ್ನು ಒಂದೆರಡು ಬಾರಿ ಗಟ್ಟಿಯಾಗಿ ಕೂಗ್ತಿದ್ದಂತೆ ನಿದ್ರೆಯಿಂದ ಏಳೇ ಬಿಡ್ತಾಳೆ. ನನ್ನ ಜೀವ ಇರೋ ತನಕ ನನ್ನಾಕಿ ಮೊದಲು ನನ್ನನ್ನು ಎಚ್ಚರ ಮಾಡ್ತಿದ್ಳು. ನಾವಿಬ್ರೂ ಯಾವುದಾದರು ವಿಚಾರವಾಗಿ, ಅಥವಾ ಹಿಂದಿನದನ್ನು ನೆಪ್ತಿ ಮಾಡಿಕೊಳ್ತಾ, ಮಾತಾಡ್ತಾ ಒಂದೆರಡು ತಾಸು ಕಾಲ ಹಾಕ್ತಿದ್ವಿ. ಏನ್ ಸೊಗಸಿತ್ರೀ ಆ ಸಮಯ. ದಿನವನ್ನು ಆರಂಭಿಸಲು, ಕಟ್ಟಿಕೊಂಡ ಮನೆಯಾಕಿಯ ಸಿಹಿ ಮಾತಿಗಿಂತ ಇನ್ಯಾವ ದಾರಿ ಮೇಲು ಹೇಳಿ!? ನಮ್ಮ ಮಾತೆಲ್ಲ ಮುಗಿದ ನಂತರ, ಸಮಯ ಆರಾಗುತ್ತಿದ್ದಂತೆ ಶಾರದೆಯನ್ನು ಎಬ್ಬರಿಸಿತ್ತಿದ್ದೆವು. ಆದ್ರೆ ಕೆಲಸದ ಜವಾಬ್ದಾರಿ ಶಾರದೆಯ ಮೇಲೆ ಬಂದ ಮೇಲೆ, ಆಕೆ ಇನ್ನೂ ಬೇಗನೆ ಏಳುವುದು ಅನಿವಾರ್ಯವಾಯ್ತು.


ಅಂದು, ಎಂದಿನಂತೆ ಶಾರದೆ ನಾಲ್ಕಕ್ಕೇ ಎದ್ದಳು. ಹಲ್ಲುಜ್ಜಿ, ಕೂದಲನ್ನು ಗಂಟು ಹಾಕಿಕೊಂಡು ಯಶೋದಮ್ಮನ ಮನೆಗೆಂದು ಒಂದು ಬುಟ್ಟಿಯೊಂದಿಗೆ ಹೊರಟಳು. ಹೂವು ಕೊಂಡು, ಮನೆಗೆ ವಾಪಾಸ್ಸಾದಳು. ಅಜ್ಜಿ-ಮೊಮ್ಮಗಳು ಇಬ್ರೂ ಸೇರಿ ಹೂವು ಕಟ್ಟಲು ಶುರುವಾದರು. ನನ್ನಾಕಿ ಪದ ಹಾಡ್ತಲೇ ಹೂವು ಕಟ್ಟೋದು! ಜೊತೆಗೆ ಶಾರದೆ ಕೂಡ ಪದ ಹಾಕ್ತಾಳೆ ಒಮ್ಮೊಮ್ಮೆ. ಕೇಳೋಕ್ಕೆ, ನೋಡ್ಲಿಕ್ಕೆ ಏನ್ ಅದ್ಭುತ ಅಂತೀರ! ಮಾಡೊ ಕೆಲಸವನ್ನು ಖುಷಿ ಪಟ್ಟು ಮಾಡಿದ್ರೆ, ಕೆಲಸ ಬಿರ್ರನೆ ಹಾಗೂ ಚೊಕ್ಕವಾಗಿಯೂ ಆಗ್ತದೆ. ಇದಂತೂ ದಿಟ. ಹೂವನ್ನು ಕಟ್ಟಿದ ನಂತರ, ಅವುಗಳನ್ನು ಮನೆಮನೆಗಳಿಗೆ ತಲುಪಿಸಲು ಶಾರದೆ ಮತ್ತೇ ಹೊರ‍ಟಳು.  ಸೂರ್ಯನು ಬೆಳಿಗ್ಗೆ ಏಳುವುದನ್ನು ಮರೆತರೂ, ಶಾರದೆಯ ಸಮಯಪ್ರಜ್ಞೆ ಮಾತ್ರ ತಪ್ಪೋಲ್ಲ ಬಿಡಿ. ಮುಂಜಾನೆ ನಾಲ್ಕರ ಆಸುಪಾಸೆಂದ ಮೇಲೆ ಮೈ ಕೊರೆಯುವ ಚಳಿ! ಆದ್ರೆ ಏನ್ಮಾಡೋದು? ಅವಳಿಗೆ ನನ್ನ ಒಂದು ಹಳೇ ಸ್ವೆಟರ್ರೇ ಗತಿಯಾಗಿದೆ. ಗಿರಾಕಿಗಳೆಲ್ಲರಿಗೂ ಹೂವು ತಲುಪಿಸಿ ಮನೆಗೆ ಹಿಂದಿರುಗುವಾಗ ಬೀದಿಯ ಮುತ್ತೈದೆಗಳೆಲ್ಲಾ ಇನ್ನೊ ರಂಗೋಲಿ ಹಾಕ್ತಿರ‍್ತಾರೆ! ಅಂದು, ಎಂದಿನಂತೆ ಎಲ್ಲರಿಗೂ ಶುಭೋದಯ ಹೇಳ್ತಾ, ವಿಚಾರ ಮಾಡ್ತಾ ಶಾರದೆ ವಠಾರಕ್ಕೆ ಬಂದಳು.


"ಅಯ್ಯೋ, ಬಂದೇ ಬಿಡ್ತು! ನಿನ್ನೆ ರಾತ್ರಿ ಬ್ಯಾಡ ಬ್ಯಾಡ ಅಂದ್ರೂ ಅತ್ತೆ ಹೊಟ್ಟೆ ತುಂಬಾ ತಿನ್ಸುದ್ಳು. ಈಗ ಕುಂಡಿ ತಂಕ ಬಂದು ಕುಂತೈತೆ.  ನಮ್ಮೂರ‍್ನಲ್ಲಿ ಈ ತಾಪತ್ರಯಾನೇ ಇಲ್ಲ. ಬಯಲ್ನಾಗೆ ಹೋಗಿ ಕೂತ್ಕೋಬೋದು. ಏನ್ ಮಾಡ್ಲಿ ನಾನು? ಅಣ್ಣಾ ಹೊರಗ್ ಬಾ ಬೇಗ, ಇಲ್ಲಾಂದ್ರೆ ಇಲ್ಲೇ ಮಾಡ್ತೀನಿ.." ಎನ್ನುತ್ತಾ ತನ್ನ ಚಡ್ಡಿಯನ್ನು ಕಳಚಲು ನಂದೀಶ ಮುಂದಾದ! ವಠಾರಕ್ಕೆ ವಾಪಾಸ್ಸಾದ ಶಾರದೆ ಇದನ್ನು ಕಂಡು ದಿಬ್ಬೆರಗಾದಳು. ಅಲ್ಲಿಯ ತನಕ ನಂದೀಶನನ್ನು ಕಂಡಿಲ್ಲದ ಶಾರದೆಗೆ ನಾನಾ ಪ್ರಶ್ನೆಗಳು ಎದುರಾದವು. "ಯಾರ‍ೋ ನೀನು? ಚಡ್ಡಿ ಹಾಕ್ಕೊ ಮೊದ್ಲು. ಇದು ನಿನ್ನ ಕುಂಡಿ ತಮಾಷೆಯನ್ನೆಲ್ಲಾ ನೋಡುವ ಜಾಗವಲ್ಲ. ಸುತ್ತಲೂ ಮನೆಗಳಿವೆ ಅಂತ ಗೊತ್ತಾಗಲ್ವ ನಿಂಗೆ?" ಅಂದಳು. ಶಾರದೆಯ ಕಠಿಣ ಮಾತುಗಳನ್ನು ಕೇಳಿ, ನಂದೀಶನ ಕುಂಡಿಯ ತನಕ ಬಂದದ್ದೆಲ್ಲಾ ಪುನಃ ಮೇಲೆ ಹೋಗಿರಬೇಕು! ಬಿರ್ರನೆ ಚಡ್ಡಿ ಹಾಕಿಕೊಂಡು, ಮುಂದೇನು ಎಂಬಂತೆ ಪಿಳಿಪಿಳಿ ನೋಡುತ್ತಾ ನಿಂತ! ಸ್ವಲ್ಪ ಕರಗಿದ ಶಾರದೆ, "ಸರಿ, ಇಲ್ಲಿ ಯಾರೋ ಇರ‍್ಬೇಕು. ನನ್ನೊಟ್ಟಿಗೆ ಬಾ, ಅಲ್ಲಿ ಇನ್ನೊಂದು ಶೌಚಾಲಯ ಇದೆ" ಎಂದಳು. ನಂದೀಶ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಅವಳ ಹಿಂದೆ ಹೊರಟ. ನಮ್ಮ ವಠಾರಕ್ಕೆ ಒಂದೇ ಶೌಚಾಲಯ. ಬೆಳಿಗ್ಗೆ ಕಾಯದೇ ನಮ್ಮ ಅಗತ್ಯಕರ್ಮಗಳನ್ನು ಮುಗಿಸಬೇಕೆಂದರೆ ಹಿಂದಿನ ದಿನದಲ್ಲಿ ಪುಣ್ಯ ಮಾಡಿರಬೇಕೇ ಸರಿ!


ಪಕ್ಕದ ಮನೆಯಲ್ಲಿನ ಗೌರಿಯನ್ನು ಶಾರದೆ ಕರೆದು, "ನಿನ್ನ ಹೆಸರೇನೋ?" ಎಂದು ನಂದೀಶನನ್ನು ಕೇಳಿದಳು. "ನಂದಕುಮಾರ್, ಥರ್ಡ್ ಸ್ಟಾಂಡರ್ಡ್" ಎಂದ! ಶಾರದೆ ಇದನ್ನು ಕೇಳಿ ನಸುನಗುತ್ತಿರಲು, ಗೌರಿ ಹೊರಬಂದಳು. "ಗೌರಿ ನೋಡೇ, ಇವ್ನು ನಮ್ಮ ವಠಾರಕ್ಕೆ ಬಂದಿದ್ದಾನೆ. ನಂದಕುಮಾರ ಅಂತೆ. ನಿನ್ನೆ ರಾತ್ರಿ ಜಾಸ್ತಿ ತಿಂದ್ನಂತೆ. ಅದಕ್ಕೆ ಈಗ ಶೌಚಾಲಯಕ್ಕೆ ಹೋಗ್ಬೇಕು ಅಂತ ಅಳ್ತಾ ಕೂತಿದ್ದ. ಅಲ್ಲಿ ಬೇರ‍್ಯಾರೋ ಇದ್ದಾರೆ. ನಿಮ್ಮನೆ ಶೌಚಾಲಯದಲ್ಲೇ ಇವತ್ತೊಂದು ದಿನ.." ಎಂದು ಶಾರದೆ ಹೇಳುತ್ತಿದ್ದಂದೆ, ಗೌರಿ ನಗುತ್ತಾ "ಬಾರೋ ಒಳಗೆ" ಎಂದು ಒಳ ನಡೆದಳು. ನಂದೀಶ ಹೇಗೋ ಹರಸಾಹಸ ಮಾಡಿ ತಡೆದುಕೊಳ್ಳುತ್ತಾ, ತನ್ನ ಕುಂಡಿಯ ಮೇಲೆ ಕೈ ಒಂದನ್ನು ಇಟ್ಟುಕೊಂಡು ಒಳ ನಡೆದ. ಶಾರದೆ ಮನೆಗೆ ವಾಪಾಸ್ಸಾಗುತ್ತಿದ್ದಂತೆ, ತನ್ನಜ್ಜಿಗೆ ನಡೆದದ್ದನ್ನು ಹೇಳಿದಳು. ಅದಕ್ಕೆ ನನ್ನಾಕಿ "ಓಹ್, ಅವ್ನು ನಂದೀಶ ಇರ‍್ಬೇಕು. ಜಯಮ್ಮನ ತಮ್ಮನ ಮಗ. ಆಗುಂಬೆಯಿಂದ ದಸರಾ ಉತ್ಸವ ನೋಡಲು ಬಂದಿದ್ದಾನೆ. ಅದ್ಯಾಕೆ ಅವನನ್ನ ಆಡ್ಕೋತ್ಯಾ? ಅವ್ನಿನ್ನೂ ಚಿಕ್ಕವ್ನು, ಅದ್ಕೇ ಹಾಗಾಯ್ತಪ್ಪಾ" ಎಂದಳು, ತನ್ನ ನಗುವನ್ನು ತಡೆದುಕೊಂಡು. ಇದೇ, ಶಾರದೆ-ನಂದೀಶನ ಮೊದಲ ಭೇಟಿಯ ರೀತಿ.


ಅಂದು, ಸಂಜೆ ಸರ್ಕಲ್ ಬಳಿ ಹೂವು ಮಾರಿ ಶಾರದೆ ಹಿಂದಿರುಗಿದಳು. ಬರ‍್ತಾ ದಾರಿಯಲ್ಲಿ ನಾಳೆಯ ಅಡುಗೆಗೆಂದು ತರಕಾರಿಗಳನ್ನೂ ಕೊಂಡು ತಂದಳು. ಇಲ್ಲಿ, ಜಯಮ್ಮನ ಮನೆಯಾಚೆಯೇ, ನಂದೀಶ ಒಬ್ಬನೇ ’ಚಕ್ಕಾ-ಬಾರ’ ಆಡುತ್ತಾ ಕುಳಿತಿದ್ದ. ಆಟದ ಚೌಕಟ್ಟನ್ನು ಬರೆದು, ಕಡಲೇಕಾಯಿ-ಬೇಳೆಕಾಳನ್ನು ಕಾಯಿಗಳಾಗಿಟ್ಟುಕೊಂಡು, ಎರಡೂ ಕಡೆಯ ಕಾಯಿಗಳನ್ನು ಒಬ್ಬನೇ ಆಡಿಸುತ್ತಾ ಕುಳಿತಿದ್ದ. ಮಕ್ಕಳಿಲ್ಲದ ವಠಾರದಲ್ಲಿ ಮತ್ತಿನ್ನೇನು ಮಾಡಿಯಾನು ಹೇಳಿ! ಶಾರದೆ ಅಲ್ಲೇ ಅವನ ಪಕ್ಕದಲ್ಲೇ ನಿಂತು, ಸ್ವಲ್ಪ ಸಮಯ ಅವನ ಆಟವನ್ನು ನೋಡಿ "ಏನೋ ನಂದೀಶ, ಒಬ್ಬನೇ ಆಡ್ತಾ ಕೂತಿದ್ಯಾ! ಯಾರೂ ಇಲ್ವ ಜೊತೆಗೆ? ಈಗ ತಾನೆ ಅಂಗಡಿಯಿಂದ ಕ್ಯಾರೆಟ್ ತಂದಿದ್ದೀನಿ. ತೆಗೊ ತಿನ್ನು" ಎಂದಳು. ರಾತ್ರಿ ಊಟದ ಸಮಯವಾದ್ದರಿಂದ ಬಹುಶಃ ನಂದೀಶನಿಗೆ ಹಸಿವಿತ್ತೆನ್ನಿಸುತ್ತದೆ. ಕೂಡಲೇ ಇಸಿದುಕೊಂಡು ತಿನ್ನುತ್ತಾ, "ಊರ‍್ನಾಗಾದ್ರೆ ದಿನಾ ರಾತ್ರಿ ನಾನೂ, ಬೇರೆ ಹುಡುಗ್ರೂ ಸೇರಿ ಆಡ್ತೀವಿ. ಇಲ್ಯಾರೂ ಜೊತೆಗಿಲ್ಲ. ಅದ್ಕೇ ಒಬ್ನೇ ಆಡ್ತಾ ಕೂತೆ ಕಣಕ್ಕ. ನೀನೂ ಆಡ್ತ್ಯಾ?" ಎಂದು ಶಾರದೆಯನ್ನೂ ಆಟಕ್ಕೆ ಕರೆದ. "ಇಲ್ಲಿ ಆಡ್ತಾ ಕೂತ್ರೆ, ಅಲ್ಲಿ ಇಟ್ಟು ಯಾರೋ ಮಾಡೋರು? ನನ್ನ ಕೆಲ್ಸ ಮುಗೀಲಿ, ಆಮೇಲೆ ಆಡ್ತೀನಿ. ಸರೀನ?" ಎಂದು ಉತ್ತರಿಸುತ್ತಾ, ನಂದೀಶನ ಕೆನ್ನೆ ಚಿವಟುತ್ತಾ ಮನೆಯೊಳಗೆ ನಡೆದಳು. ಆಟ ನೀರಸವೆನಿಸ ತೊಡಗಿತ್ತೋ ಏನೋ! ನಂದೀಶನೂ ಅವಳೊಟ್ಟಿಗೆ ಒಳ ನಡೆದ.


ಮನೆಯೊಳಗೆ ಬಂದವನೇ ಗೋಡೆಯ ಮೇಲಿನ ನನ್ನ ಫೋಟೋವನ್ನು ಕಂಡು "ಈ ದಪ್ಪದ ಮೀಸೆ ತಾತಪ್ಪ ಯಾರು? ಈ ತಾತನ ಮೀಸೇಲಿ ಒಂದು ಕರೀ ಕೂದ್ಲೂ ಇಲ್ಲ!?" ಎನ್ನುತ್ತಾ ನನ್ನ ಮುಪ್ಪನ್ನು ಹಾಸ್ಯ ಮಾಡತೊಡಗಿದ. ನಾನು ಫೋಟೋವಿಂದಲೇ "ಎಲಾ ಇವನ!" ಎಂದುಕೊಂಡೆ. ಅಲ್ಲೇ ದೇವರ ಫೋಟೋವೊಂದರ ಬಳಿ ಕೂತು ಮೆಲ್ಲನೆಯ ದನಿಯಲ್ಲಿ ಹಾಡು ಹೇಳುತ್ತಿದ್ದ ನನ್ನಾಕಿ "ಬಾರೋ ನಂದೀಶ. ಅದು ಶಾರದೆ ತಾತ ಕಣೋ. ವಯಸ್ಸಾಗಿತ್ತು ನೋಡು, ಅದಕ್ಕೆ ಮೀಸೆ ಕೂಡ ಬಿಳಿಯಿದೆ" ಎಂದಳು. "ಹೋಗ್ಲೀ, ತಲೆಗೆ-ಮೀಸೆಗಾದ್ರೂ ಬಣ್ಣ ಹಾಕ್ಕೊಳೋದಲ್ವಾ!? ನಮ್ಮ ಊರ‍್ನಾಗೆ ಚೌರ ಮಾಡೋ ಎಂಗ್ಟಪ್ಪ ಪಟ್ಟಣದಿಂದ ಸೀಸಾಯಿ ಒಂದರಲ್ಲಿ ಬಣ್ಣ ತಂದು ಹಚ್ತಾನೆ. ನಮ್ಮ ಪಕ್ಕದ ಮನೆಯ ಚಿಕ್ಕಯ್ಯ ತಾತಾನೂ ಹಚ್ಚಿಸಿಕೊಳ್ತಾರೆ!" ಎನ್ನುತ್ತಾ ತನ್ನ ಊರಿನ ವಾತಾವರಣದಿಂದ ಗ್ರಹಿಸಿದ ’ಸಮಾನ್ಯ ಜ್ಞಾನ’ವನ್ನು ಪ್ರದರ್ಶಿಸಿದ.  ಈ ಬಣ್ಣದ ವಿಚಾರವಾಗಿ ಅಷ್ಟು ತಿಳಿಯದ ಶಾರದೆ "ಅದರಿಂದ ಕೂದ್ಲು ಉದುರುತ್ತದೆ ಕಣೋ. ಅದ್ಕೇ ನಮ್ಮ ತಾತ ಏನನ್ನೂ ಹಚ್ಚಿಸಿಕೊಳ್ಳುತ್ತಿರಲಿಲ್ಲ" ಎಂದಳು. ಇದು ನಿಜವೆಂದೇ ತಿಳಿದ ನಂದೀಶ ಕೂಡಲೇ "ಹಾಗಾದ್ರೆ ನಮ್ಮ ಚಿಕ್ಕಯ್ಯ ತಾತನಿಗೆ ಈ ವಿಷಯವನ್ನು ಊರು ತಲುಪಿದ ತತ್‍ಕ್ಷಣ ಹೇಳ್ತೀನಿ. ಅವರ ಕೂದಲೆಲ್ಲಾ ಉದುರಿ ಹೋದ್ರೆ ಎನ್ ಕಥೆ?" ಎಂದ ಚಿಂತಾಕ್ರಾಂತನಾಗಿ. ಅಷ್ಟರಲ್ಲಿ ಶಾರದೆ ಇಟ್ಟು ತಿರುವಲೆಂದು ಕೂತಳು.


ಇಟ್ಟು ತಿರುವುತ್ತಾ "ನಿಮ್ಮ ಆಗುಂಬೆ ಬಗ್ಗೆ ಹೇಳೋ ಸ್ವಲ್ಪ. ಅಲ್ಲಿ ಸಿಕ್ಕಾಪಟ್ಟೆ ಮಳೆ ಅಲ್ವಾ ಈಗ?" ಎಂದು ಪ್ರಶ್ನಿಸಿದಳು ಶಾರದೆ. "ಹೌದು. ಮಳೆ ಇದ್ದೇ ಇರುತ್ತೆ. ಸ್ನಾನ ಮಾಡಂಗೇ ಇಲ್ಲ! ಮೈಗೆ ಒಂದಿಷ್ಟು ಸಾಬೂನಚ್ಚಿ ಮಳೇಲಿ ನಿಂತ್ರಾಯ್ತು! ಮಳೆ ಜೋರಾದ್ರೆ, ಸುಮಾರು ಸಲ ಶಾಲೆಗೆ ಹೊಗದೇ ಇರೋಕ್ಕೆ ಒಳ್ಳೆ ಕಾರಣ ಸಿಗ್ತದೆ. ಆಮೇಲೇ, ನಮ್ಮೂರ‍್ನಲ್ಲಿ ಈಗ ಶಂಕರ್ ನಾಗ್ ಬಂದವ್ರೆ! ಅಲ್ಲಿ ಯಾವ್ದೊ ಸಿನೆಮಾ ತೆಗೀತಾವ್ರೆ. ನಮ್ ಲೋಕೇಶನ ದೊಡ್ಡಪ್ಪನ ಮನೇಗೆ ಕ್ಯಾಮೆರ ತಂದು ಸುಮಾರು ಜನ ಸೇರಿದ್ರು. ನಾನೂ ಲೋಕೇಶನೂ ಸೇರಿ ಅಲ್ಗೆ ಹೋಗಿ ಶಂಕರ್ ನಾಗ್ ಅಣ್ಣನ್ನ ನೋಡ್ಕೊಂಡು ಬಂದ್ವಿ!" ಎನ್ನುತ್ತಾ ತನ್ನ ಸಾಧನೆಯನ್ನು ಕೊಚ್ಚಲಾರಂಭಿಸಿದ! ವಿಷಯ ಕೇಳುತ್ತಿದ್ದಂತೆ ಶಾರದೆ "ಹೌದೇನೋ? ಅವ್ರು ಸೂಟು-ಬೂಟು ಹಾಕ್ಕೊಂಡಿದ್ರಾ? ಕನ್ನಡಕ ಧರಿಸಿದ್ರಾ? ಕುಣಿದ್ರೇನೊ?" ಎಂದು ತನ್ನ ಇಟ್ಟು ತಿರುವಿಕೆಗೆ ಕೊಂಚ ವಿರಾಮ ಕೊಟ್ಟು ಉತ್ಸಾಹದಲ್ಲಿ ಕೇಳಿದಳು. "ಇಲ್ಲ. ಇದ್ರಲ್ಲಿ ಅವ್ರು ಬರೀ ಕ್ಯಾಮೆರ ಇಟ್ಟುಕೊಂಡು ನಿಂತಿದ್ರು. ಬೇರೆಯವರ‍್ಯಾರೋ ನಟಿಸ್ತಾ ಇದ್ರು. ಮುಂದಿನ ತಿಂಗಳು, ದಸರೆ ಆದ್ಮೇಲೆ ವಿಷ್ಣುವರ್ಧನ್, ಅನಂತ್ ನಾಗ್ ಎಲ್ರೂ ಬರ‍್ತಾರಂತೆ! ಆದ್ರೆ ನಂಗೆ ಶಂಕ್ರಣ್ಣ ಅಂದ್ರೆ ಜಾಸ್ತಿ ಇಷ್ಟ. ಅವ್ರು ಮಾತಾಡೋ ವರಸೆ ನೋಡುದ್ರೆ ಮಾತ್ರ, ನೋಡ್ತಾನೇ ಇರ‍್ಬೇಕು ಅನ್ನಿಸ್ತದೆ!" ಎನ್ನುತ್ತಾ ತನ್ನ ಶಂಕರ್ ನಾಗಿನ ಲೋಕದಲ್ಲಿ ತಲ್ಲೀನನಾದ! "ಅವರೆಲ್ಲಾ ಬರ‍್ತಾರೇನೋ? ಹಾಗಾದ್ರೆ ನಮ್ಮ ಶಾರದೆಯನ್ನೂ ಕರೆದುಕೊಂಡು ಹೊಗೋ ನಿಮ್ಮೂರಿಗೆ" ಎಂದಳು ನನ್ನಾಕಿ, ಬಾಯಿ ಮಾತಿಗೆ. "ಅದ್ಕೇನಂತೆ, ನನ್ ಜೊತೆ ಬಸ್ಸನ್ನು ಹತ್ಸಿ! ನಮ್ಮನೇಲೆ ಇರ‍್ಸಿಕೊಂಡು ಆಗುಂಬೇನ ಪೂರ ಸುತ್ತಾಡ್ಸಿ, ಕುಂಚಿಕಲ್ ಜಲಪಾತ ತೋರ‍್ಸಿ, ಶಂಕ್ರಣ್ಣನ್ನೂ ಭೇಟಿ ಮಾಡಿಸ್ತೀನಿ! ಬೇಕಂದ್ರೆ ಹಾಡೂ ಹಾಡಿಸ್ತೀನಿ. ನಾನೇ ಒಮ್ಮೆ ಹಾಡಿ ತೋರಿಸ್ಲಾ?.." ಎನ್ನುತ್ತಾ ತಟಕ್ಕನೆ ಎದ್ದು ನಿಂತು ಹಾಡಲಾರಂಭಿಸಿದ. "ಸಂತೋಷಕ್ಕೆ, ಹಾಡು ಸಂತೋಷಕ್ಕೆ.. ಕುಣಿದು ತಾಳಕ್ಕೆ ಕುಣಿದು.." ಎನ್ನುತ್ತಾ ಹೆಜ್ಜೆಯಾಕಲಿವನು, ಜಯಮ್ಮ "ಲೋ ನಂದೀಶ, ಊಟಕ್ಕೆ ಬಾರೋ. ನಿಮ್ಮ ಮಾವಾನು ಊಟಕ್ಕೆ ಕೂತೌರೆ, ಬೇಗನೆ ಬಾ" ಎಂದು ಕೂಗಿದಳು. ಊಟವೆಂದು ಕೇಳುತ್ತಿದ್ದಂತೆ ನಂದೀಶ "ಸರಿ ಅಜ್ಜಿ, ಶಾರದಕ್ಕ- ನಾನು ಆಮೇಲೆ ಸಿಕ್ತೀನಿ" ಎನ್ನುತ್ತಾ ತನ್ನ ಅತ್ತೆಯ ಮನೆಯೆಡೆ ಓಡಲಾರಂಭಿಸಿದ. ಇಲ್ಲಿಯ ತನಕ ನಂದೀಶನ ಮುಗ್ಧತೆಗೆ, ಮಾತಿಗೆ, ಕುಣಿತಕ್ಕೆ- ತಲೆಯಾಡಿಸುತ್ತಾ ಕೂತಿದ್ದ ಶಾರದೆ ಮತ್ತು ನನ್ನಾಕಿ ಸುಮ್ಮನಾದರು. ಎಷ್ಟೋ ಸಮಯದ ನಂತರ ಒಂದಿಷ್ಟು ನಗೆ ತುಂಬಿತ್ತು ನಮ್ ಮನೆಯಾಗೆ ಅವತ್ತು!    


ಮರುದಿನ ಬೆಳಿಗ್ಗೆ ಶಾರದೆ ಹೂವು ಕೊಟ್ಟು ಮನೆಗೆ ಹಿಂದಿರುಗಿದಾಗ ಪುನಃ ನಂದೀಶನೊಂದಿಗೆ ಅವಳ ಭೇಟಿಯಾಯಿತು. ಶಾರದೆಯನ್ನು ಕಂಡು "ಅಕ್ಕಾ ಎಲ್ಲಿಂದ ಬರ‍್ತಿದ್ದೀ? ಏನ್ ಬುಟ್ಟಿಯದು?" ಎಂದು ಪ್ರಶ್ನಿಸಿದ. "ಎಲ್ಲರ ಮನೆಗಳಿಗೂ, ಆಲದ ಮರದ ಬಳಿಯಿರುವ ಗಣೇಶನ ದೇವಸ್ಥಾನಕ್ಕೂ, ಹೂವು ಕಟ್ಟಿ ಸಮಯಕ್ಕೆ ಸರಿಯಾಗಿ ತಲುಪಿಸಿ ಬರಬೇಕೋ. ಅದಕ್ಕೆ, ಮುಂಜಾನೆ ನಾಲ್ಕಕ್ಕೇ ಎದ್ದು ಕೆಲ್ಸ ಮಾಡ್ಬೇಕಾಗ್ತದೆ. ಯಾಕೆ, ನೀನು ಬರ‍್ತ್ಯಾ ಜೊತೆಗೆ?" ಎಂದಳು ಶಾರದೆ. "ಏನು? ನಾಲ್ಕು ಘಂಟೆಗಾ? ಅಷ್ಟರಲ್ಲಿ ನನ್ನ ಅರ್ಧ ನಿದ್ರೇನೂ ಸರಿಯಾಗಿ ಆಗಿರಲ್ಲಪ್ಪ. ನೀನು ಇನ್ಮೇಲೆ ಒಂಬತ್ತು ಘಂಟೆಗೆ ಹೂವು ಕೊಡು. ಅಷ್ಟರಲ್ಲಿ ನಾನು ಸ್ನಾನ ಮಾಡಿ, ತಿಂಡಿ ಮುಗಿಸಿ, ತಲೆಗೆ ಎಣ್ಣೆ ಸವರಿ-ಬಾಚಿಕೊಂಡು ಬರ‍್ತೀನಿ. ನಾಳೆಯಿಂದ ಹಾಗೇ ಮಾಡೋಣ" ಎಂದು ತನ್ನ ಉದ್ದೇಶವನ್ನು ಮುಂದಿಟ್ಟ. ಅದಕ್ಕೆ ಶಾರದೆ "ಅಲ್ವೋ ನಾವು ಒಂಬತ್ತು ಘಂಟೆಗೆ ಹೋದ್ರೆ, ದೇವರ ಪೂಜೆ ಸಮಯಕ್ಕೆ ಸರಿಯಾಗಿ ಹೇಗೋ ನಡೆಯುತ್ತೆ? ಆಮೆಲೆ ದೇವರಿಗೆ ಕೋಪ ಬಂದು ಶಾಪ ಕೊಟ್ರೆ!?" ಎಂದಳು. "ಓಹ್! ಬೇಡಪ್ಪ ಹಾಗಾದ್ರೆ. ನೀನು ಒಬ್ಬಳೇ ಬೇಗ ಎದ್ದು ಹೋಗು" ಎಂದ ಭಯದಿಂದ. ಇದಕ್ಕೆ ಶಾರದೆ ನಗುತ್ತಾ "ಸರೀ, ಒಂದು ಕೆಲ್ಸ ಮಾಡು. ನಾನು ಪುನಃ ಸಂಜೆ ಐದಕ್ಕೆ ಸರ್ಕಲ್ ಬಳಿ ಕೂತು ಹೂವು ಮಾರಲು ಹೋಗ್ತೀನಿ. ನೀನು ನಿನ್ನ ಅತ್ತೇನ ಕೇಳಿ ನನ್ನೊಟ್ಟಿಗೆ ಬರುವಂತೆ. ಸರೀನ?" ಎಂದಳು. "ಸರಿ. ನಾನು ಈಗಲೇ ಹೋಗಿ ಕೇಳ್ತೀನಿ" ಎನ್ನುತ್ತಾ ನಂದೀಶ ತನ್ನ ಮನೆಯೊಳಗೆ ಓಡುತ್ತಾ "ಅತ್ತೇ.., ಅತ್ತೇ.." ಎಂದು ಕೂಗಿದ. ಶಾರದೆ ನಮ್ಮ ಮನೆಯೊಳಗೆ ನಡೆದಳು.


"ಹುಷಾರು ಕಣೇ ಶಾರದೆ. ಅವನಿಗೆ ಇಲ್ಲಿನ ದಾರಿ ಬೇರೇ ಗೊತ್ತಿಲ್ಲ. ದಾರಿ ತಪ್ಪಿಸಿಕೊಳ್ಳದಂತೆ ಜೊತೆಗೇ ಇರಿಸಿಕೊಂಡಿರು. ಹೊಟ್ಟೆ ಹಸಿವಾದರೆ ಸರ್ಕಲ್ ಬಳಿಯ ದೇವಯ್ಯನ ಅಂಗಡಿಯಲ್ಲಿ ಚಕ್ಲಿ ಕೊಡಿಸು. ಜೋಪಾನ" ಎನ್ನುತ್ತಾ ಜಯಮ್ಮ ನಂದೀಶನನ್ನು ಶಾರದೆಯೊಂದಿಗೆ ಕಳುಹಿಸಿದಳು. ಅಂದು ಶುಕ್ರವಾರವಾದ್ದರಿಂದ ಮೊದಲು ದೇವಸ್ಥಾನಕ್ಕೆ ನಡೆದರು. ಶಾರದೆ ಪ್ರತಿ ಶುಕ್ರವಾರ, ಆಲದ ಮರದ ಬಳಿಯ ಗಣೇಶನ ದೇವಸ್ಥಾನಕ್ಕೆ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದಾಳೆ. ಜೊತೆಗೇ ಇರುವ ಪಾರ್ವತಿಯ ಗುಡಿಗೂ ಹೋಗಿ ಪ್ರಾರ್ಥಿಸಿ ಬರ‍್ತಾಳೆ. ಅವಳಲ್ಲಿ ದೈವ ಭಕ್ತಿ ಜಾಸ್ತಿಯೇ! ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳಿ ಮಲಗಿಸುತ್ತಿದ್ದೆ ನಾನು. ಮನೆಯಲ್ಲಿ ಹಬ್ಬ-ಹರಿ ದಿನಗಳಾಗಲಿ, ವಾರದ ಪೂಜೆಯಾಗಲಿ- ಚಿಕ್ಕಂದಿನಿಂದಲೂ ಎಲ್ಲಾ ಅವಳದ್ದೇ.


ದೇವರಿಗೆ ಪ್ರಾರ್ಥಿಸಿ, ಆರತಿ ತೆಗೆದುಕೊಂಡು, ತೀರ್ಥ ಸ್ವೀಕರಿಸಿ, ಪ್ರದಕ್ಷಿಣೆ ಹಾಕಿ, ಪ್ರಸಾದ ತಿನ್ನುತ್ತಾ ಆಲದ ಮರದ ಬಳಿ ಇಬ್ಬರೂ ಕೂತರು. ನಂದೀಶ ಇಷ್ಟನ್ನೂ ಶಾಲೆಯ ಡ್ರಿಲ್ಲಿನಂತೆ ಮಾಡಿ ಪೂಜಾರಿಗಳು ಕೊಟ್ಟ ಸಜ್ಜಿಗೆಯನ್ನು ಬೇಗ ಬೇಗ ತಿನ್ನಲಾರಂಭಿಸಿದ. "ಹಾಗಲ್ವೋ! ಕಣ್ಣಿಗೆ ಒತ್ತಿಕೊಂಡು ತಿನ್ನಬೇಕು. ದೇವರ ಪ್ರಸಾದವನ್ನು ಅಷ್ಟೂ ಬಿಡದೆ ತಿನ್ನಬೇಕು. ಆಗಲೇ ದೇವರ ಹಾರೈಕೆ ನಮ್ಮ ಮೈಗಗೂಡುವುದು. ಮೆಲ್ಲಗೆ ತಿನ್ನು" ಎನ್ನುತ್ತಾ ಕಣ್ಣಿಗೆ ಹೇಗೆ ಒತ್ತಿಕೊಳ್ಳುವುದೆಂದು ತೋರಿಸಿದಳು ಶಾರದೆ. ಅವಳು ಹೇಳಿದ್ದನ್ನು ವೇದವಾಕ್ಯದಂತೆ ಸ್ವೀಕರಿಸಿ "ಅದೂ.., ನಮ್ಮೂರ‍್ನಾಗೂ ಗಣೇಶನ ಗುಡಿಯಿದೆ. ಸಂಜೆ ಹೊಟ್ಟೆ ಹಸಿವಾದ್ರೆ, ಅಜ್ಜ ನಾಕಾಣೆ ಕೊಡಲಿಲ್ಲಾಂದ್ರೆ, ನಾವು ಹುಡುಗ್ರು ಆ ದೇವಸ್ಥಾನಕ್ಕೆ ಪೂಜೆಯ ನೆಪವಾಗಿ ಹೋಗಿ ಪ್ರಸಾದ ತಿಂದು ಬರ‍್ತೇವೆ. ಅದ್ಕೇ ಇಲ್ಲೂ ಹಾಗೇ ಮಾಡ್ದೆ. ನಮ್ಮೂರ ಸಜ್ಜಿಗೆನಾಗೆ ನಮ್ಮ ಪೂಜಾರಪ್ಪ ಇಷ್ಟು ತುಪ್ಪ, ದ್ರಾಕ್ಷಿ ಹಾಕದೇ ಇಲ್ಲಾಪ್ಪ. ಎಲ್ರೂ ಅವನು ತುಪ್ಪ-ದ್ರಾಕ್ಷಿ ಕದೀತಾನೆ ಅಂತಾರೆ! ಆದ್ರೂ, ದೇವಸ್ಥಾನದಲ್ಲಿ ಸುಮ್ನೆ ಕೇಳಿದೊಡೆ ಪ್ರಸಾದ ಯಾಕೆ ಕೊಡೋಲ್ಲ ಅಂತ ನಾನು ನಮ್ಮಜ್ಜನನ್ನು ಒಮ್ಮೆ ಕೇಳಿದೆ. ಅದ್ಕೆ ಅವ್ರು ದೇವರಲ್ಲಿ ಪ್ರಾರ್ಥಿಸಿದರೆ ಅವನು ಪ್ರತ್ಯಕ್ಷನಾಗಿ, ಕೇಳಿದ ವರ ಕೊಡ್ತಾನೆ ಅಂದ್ರು. ಆದ್ರೆ ಏನೋಪ್ಪ, ಇದುವರೆಗೂ ಯಾರೂ ನಮ್ಮೊರ‍್ನಾಗೆ ದೇವ್ರನ್ನ ಇನ್ನೂ ಕಂಡೇ ಇಲ್ಲ. ನೀನು ನೋಡಿದ್ಯೇನಕ್ಕಾ?" ಎನ್ನುತ್ತಾ ತನ್ನ ಉಹಾಪೋಹಗಳನ್ನು ಮುಂದಿಟ್ಟ. "ನೋಡೋ. ದೇವ್ರು ಇದ್ದಾರೋ ಇಲ್ವೋ ನನಗೂ ಗೊತ್ತಿಲ್ಲ. ಆದರೆ ನಾವು ಯಾಕೆ ದೇವಸ್ಥಾನಕ್ಕೆ ಬರಬೇಕು ಅಂದ್ರೆ- ’ನೋಡಪ್ಪಾ ದೇವರೇ, ನೀನು ನನ್ನನ್ನು ಇಂದು ಜೋಪಾನವಾಗಿ ಇಟ್ಟಿರುವೆ. ಅಷ್ಟು ಸಾಕು ನನಗೆ. ಈ ನಿನ್ನ ಅನುಗ್ರಹದಿಂದ ನಾನು ಇನ್ನೂ ಕಷ್ಟ ಪಟ್ಟು ದುಡಿಯುವೆ, ಕೆಲಸ ಮಾಡುವೆ. ಈ ಲೋಕದಲ್ಲಿ ಧರ್ಮಕ್ಕೇ ಜಯ ಸಿಗುವಂತೆ ನೋಡಿಕೋ. ನಾನು ತಪ್ಪು ಮಾಡಿದರೆ ತಿದ್ದು. ನೀನು ಎಲ್ಲೇ ಇದ್ದರೂ ಚೆನ್ನಾಗಿರು’- ಎಂದು ಪದೇ ಪದೇ ಹೇಳಲಿಕ್ಕೇ ಹೊರತು, ಪ್ರಸಾದ ತಿನ್ನಲಾಗಲಿ ಅಥವಾ ದೇವರು ಪ್ರತ್ಯಕ್ಷವಾದಾನೆ-ಇಲ್ಲವೇ ಎಂದು ನೋಡಲಿಕ್ಕೆ ಅಥವಾ ವರಗಳ ಅತಿಆಸೆಗಾಗಿ ಅಲ್ಲ" ಎಂದು ತನಗೆ ತಿಳಿದದ್ದನ್ನು ಹೇಳಿದಳು ಶಾರದೆ. "ಸರಿ, ನಾನೂ ಇನ್ಮೇಲೆ ಹೀಗೆ ಮಾಡ್ತೀನಿ! ನಂಗೂ ಇದನ್ನ ಬಾಯ್‍ಪಾಠ ಮಾಡ್ಸು. ಆದ್ರೆ ಇನ್ನೊಂದು ಕಿತ ಸಜ್ಜಿಗೆ ಇಸಿದುಕೊಂಡು ಬರ‍್ಲಾ" ಎನ್ನುತ್ತಾ ಗೋಗರೆದ ನಂದೀಶ. "ನನ್ನದೇ ಸ್ವಲ್ಪ ಮಿಕ್ಕೆದೆ ತೆಗೋ" ಎನ್ನುತ್ತಾ ತನ್ನ ಮಿಕ್ಕ ಭಾಗವನ್ನು ನಂದೀಶನಿಗೆ ಕೊಟ್ಟಳು ಶಾರದೆ.  


ಇತ್ತೆಡೆ, ದಸರೆಗೆ ಮೈಸೂರು ಸಜ್ಜಾಗುತ್ತಿತ್ತು. ಉತ್ಸವಕ್ಕೆ ಇನ್ನೂ ಒಂದು ತಿಂಗಳಷ್ಟೇ ಉಳಿದಿತ್ತು. ರಾಜ್ಯದ ವಿವಿಧ ಭಾಗಗಳಿಂದ ಕಲಾಕಾರರು ಬರತೊಡಗಿದರು. ಮೈಸೂರಿನ ದಸರೆಯ ಗಾಳಿಯ ಸೊಗಸೇ ಸೊಗಸು ಬಿಡಿ. ಅರಮನೆಯ ಆಕರ್ಷಣೆಯನ್ನು ತುಂಬಿಕೊಳ್ಳಲು ಎರಡು ಕಣ್ಣೂ ಸಾಲದು. ಮೈಸೂರು ನಿಜಕ್ಕೊ ’ಸಾಂಸ್ಕೃತಿಕ ರಾಜಧಾನಿ’ಯೇ ಸರಿ. ಈ ದಸರೆಯ ಸಲುವಾಗಿ ನಮ್ಮ ಶಾರದೆಯ ಬಾಳಲ್ಲಿ ಹೊಸ ಚೇತನವೊಂದು ತುಂಬಿತು. ನಂದೀಶ ಬಂದ ನಂತರ ಶಾರದೆ ಹೆಚ್ಚು ನಗಲಾರಂಭಿಸಿದಳು. ಅವಳಿಗೆ ಸ್ನೇಹಿತರೇ ಕಡಿಮೆ. ಗೌರಿ ಜೊತೆಯವಳಾದರೂ, ಇವರಿಬ್ಬರು ಒಟ್ಟಿಗೆ ಸಮಯ ಕಳೆವುದು ಕಡಿಮೆಯೇ. ನಮಗೆ ಯಾವ ನೆಂಟರಿಷ್ಟರೂ ಇಲ್ಲ ಬೇರೆ. ಸ್ವಾಮೀ, ನಾವು ಊರು ಬಿಟ್ಟು ಓಡಿ ಬಂದವರಲ್ಲವೇ! ಹೇಗೋ ನಂದೀಶನಿರುವಷ್ಟು ದಿನ ಶಾರದೆ ಖುಶಿಯಿಂದ ಇರ‍್ತಾಳೆ. ಅದೊಂದೇ ಸಮಾಧಾನದ ವಿಷಯ.


ನನ್ನಾಕಿ ಊಟಕ್ಕೆ ತರಕಾರಿ ಬಿಡಿಸುತ್ತಾ ಕೂತಿದ್ದಳು. ಶಾರದೆ ಸ್ನಾನಕ್ಕೆ ಹೋಗಲೆಂದು ಒಲೆಯ ಮೇಲೆ ನೀರನ್ನು ಬಿಸಿಗಿಟ್ಟಳು. ಬಟ್ಟೆಯನ್ನು ಹುಡುಕುತ್ತಾ ಹಾಸಿಗೆಯ ಪಕ್ಕದ ಮೂಲೆಯಲ್ಲಿಟ್ಟುರುವ ತನ್ನ ಪೆಟ್ಟಿಗೆಯನ್ನು ತೆಗೆದಳು. ಇರುವ ಮೂರ‍್ನಾಲ್ಕು ಜೊತೆ ಬಟ್ಟೆಯಲ್ಲಿ ಇನ್ನೇನು ಹುಡುಕಿಯಾಳು ಹೇಳಿ? ಬಡವರಿಗೆ ಇಂತಹ ಪೆಟ್ಟಿಗೆಯಲ್ಲೇ ಸ್ವಾಮಿ ಸಾವಿರಾರು ನೆನಪುಗಳಿರೋದು! ಪೆಟ್ಟಿಗೆಯನ್ನು ಪೂರ ತುಕ್ಕಿಡಿಯುವ ತನಕ ನಾವು ಬಿಸಾಡುವುದಿಲ್ಲ. ವರ್ಷದಲ್ಲಿ ಸಂಕ್ರಮಣಕ್ಕೊಮ್ಮೆ-ದೀಪಾವಳಿಗೊಮ್ಮೆ ಬಟ್ಟೆ. ಬಟ್ಟೆಯಲ್ಲಿ ಹೊಲಿಗೆ ಬಿಚ್ಚಿದರೂ, ತೂತು ಬಂದರೂ- ಅದಕ್ಕೆ ತಕ್ಕ ಶಾಸ್ತಿ ಮಾಡಿ ಪುನಃ ಹಾಕ್ಕೊಳ್ತೇವೆ. ನೆಪ್ತಿ-ಗುರುತಿಗೆಂದು ಬಿಗಿಯಾಗುವ ಬಟ್ಟೆಗಳನ್ನು ಬಿಸಾಡದೇ ಪೆಟ್ಟಿಗೆಯಲ್ಲೇ ಜೋಪಾನ ಮಾಡ್ತೇವೆ. ಆಯಸ್ಸಿನ ಯಾವ ಸಂದರ್ಭದಲ್ಲಿಯೂ ಒಬ್ಬರಿಗೆ ಒಂದು ಪೆಟ್ಟಿಗೆ ಕಡಿಮೆ ಬೀಳುವುದಿಲ್ಲ!


ಗೌರಿಯು ತನ್ನ ನಾಲ್ಕು ವರ್ಷಗಳ ಹಿಂದೆ ದೀಪಾವಳಿಗೆಂದು ಕೊಂಡ ಲಂಗವನ್ನು ಶಾರದೆಗೆ ಕೊಟ್ಟಿದ್ದಳು. ಇದನ್ನು ಕಂಡು ಶಾರದೆಯ ಮನದಾಳದಲ್ಲಿ ನಾನಾ ಆಲೋಚನೆಗಳು ಹಿಂದಿರುಗಿದವು. ಗೌರಿಯ ಲಂಗವನ್ನು ಕೈಯಲ್ಲೇ ಇಟ್ಟುಕೊಂಡು, ಪೆಟ್ಟಿಗೆಯನ್ನು ಮುಚ್ಚದೇ ಕೆಲಕ್ಷಣ ಯೋಚನೆಯಲ್ಲಿ ಮುಳುಗಿದಳು. ತನ್ನ ಹೆತ್ತವರೊಂದಿಗೆ ಆಚರಿಸಿದ ಏಕೈಕ ದೀಪಾವಳಿ, ನಾನು ಬದುಕಿದ್ದಾಗ ಸಂಭ್ರಮಿಸಿದ ದೀಪಾವಳಿ, ಹೊಸ ಲಂಗ-ದಾವಣಿ ಕೊಳ್ಳುವ ಆಸೆ ತಂದಿಟ್ಟುರುವ ದೀಪಾವಳಿ- ಎಲ್ಲವನ್ನೂ ಯೋಚಿಸುತ್ತಾ ಜಡವಾದಳು. ಈ ನಿಶ್ಯಬ್ಧವನ್ನು ಗಮನಿಸಿ ನನ್ನಾಕಿ "ಶಾರದೆ, ಯಾಕೇ-ಏನಾಯ್ತು? ಸುಮ್ನೆ ಯಾಕೆ ಕೂತಿದ್ದೀ? ಮೈ ಸರಿ ಇಲ್ವೇನೆ?" ಎಂದಳು. "ಇಲ್ಲಜ್ಜಿ, ಏನಿಲ್ಲ. ಪೆಟ್ಟಿಗೆ ಮುಚ್ತಾ ಇದ್ದೀನಿ ಅಷ್ಟೆ" ಎಂದಳು ಶಾರದೆ, ನಿಜ ವಿಷಯವನ್ನು ಹೇಳದೇ. "ಪೆಟ್ಟಿಗೆ ಮುಚ್ಚೋಕೆ ಇಷ್ಟೊತ್ತು ಬೇಕೇನೇ? ಯಾಕೇ, ಯಾರಾದ್ರು ಏನಾದ್ರು ಅಂದ್ರೇನು?" ಎಂದು ಮರು ಪ್ರಶ್ನಿಸಿದಳು ನನ್ನಾಕಿ. "ಇಲ್ಲಜ್ಜಿ, ಯಾರ್ ಏನ್ ಅಂತಾರೆ? ಏನಿಲ್ಲ" ಅಂದಳು. ಶಾರದೆಯ ಮೆಲ್ಲನೆಯ ದನಿಯನ್ನು ಕೇಳಿ ನನ್ನಾಕಿಗೆ ಸಂಶಯ ಬಂತೆನಿಸುತ್ತದೆ. "ಪೆಟ್ಟಿಗೆ ತುಂಬಾ ಹಳೆ ಬಟ್ಟೆಗಳೇ ಇವೆಯೆಂದು ಬೇಸರವೇನೆ? ಬೇಸರ ಮಾಡ್ಕೊ ಬೇಡ್ವೆ ನನ್ ತಾಯಿ. ಕಷ್ಟದ ಕಾಲ, ಒಪ್ಪತ್ತು ಊಟಕ್ಕೇ ಸ್ವಲ್ಪ ತೊಂದ್ರೆ. ಕಾಲಿಲ್ಲದವನಿಗೆ ಯಾಕ್ ತಾಯಿ ಮರವ ಹತ್ತುವ ಆಸೆ? ಹೇಳು" ಎಂದಳು. ಕೆಲಕ್ಷಣ ಸುಮ್ಮನಿದ್ದು, "ಅಜ್ಜೀ.. ಅದು.. ಸಂಜೆ ಐದ್ರಿಂದ ಏಳರ ಬದಲು ಎಂಟರವರೆಗೆ ಸರ್ಕಲ್ ಬಳಿ ಕೂತರೆ ಯಶೋದಮ್ಮ ನೂರು ರೂಪಾಯಿ ಹೆಚ್ಚಾಗಿ ಕೊಡ್ತೀನಿ ಅಂದ್ರೂ.. ದೀಪಾವಳಿಗೆ ಇನ್ನೂ ಎರಡು ತಿಂಗಳಿವೆ. ಕೇವಲ ಒಂದು ತಾಸು ಜಾಸ್ತಿ ಅಲ್ವೇ?.. ನಾಳೆಯಿಂದ ಹಾಗೇ ಮಾಡಲೇ?.. ಹಬ್ಬಕ್ಕೆ ಹೊಸ ಬಟ್ಟೆ ಕೊಳ್ಳಬಹುದಾಗ" ಎಂದು ತನ್ನ ಇಚ್ಛೆಯ ಬಗ್ಗೆ ಕೊನೆಗೂ ಹೇಳಿಕೊಂಡಳು. ಸ್ವಲ್ಪ ಹೊತ್ತು ಮೌನವಿದ್ದ ನನ್ನಾಕಿ "ಸರಿ ತಾಯಿ. ದುಡಿವವಳು ನೀನು. ನಿನಗೇ ಕೆಲ್ಸ ಮಾಡುವ ನಿಲುವು ಇದ್ದ ಮೇಲೆ ನಾನ್ಯಾಕೆ ಬೇಡವೆನ್ನಲಿ? ಹಾಗೇ ಮಾಡು. ಈ ಕಷ್ಟ ಇನ್ ಸ್ವಲ್ಪ ದಿನವಷ್ಟೇ. ಅಲ್ಲಿಯ ತನಕ ಸಹಿಸಿಕೋ ನನ್ನಮ್ಮ!  ದೇವ್ರು ಆಸ್ತಿಗೆ ಒಂದು ದಾರಿ ಮಾಡಿ ನಿನ್ನ ಮದುವೆ ನೆರವೇರಿಸಿದರೆ ಸಾಕು. ಅಲ್ಲಿಗೆ ನಮ್ಮ ಸಂಕಟ ಮುಗಿದಂತೆ. ಅದಿರ‍್ಲಿ, ನೀನು ಯಶೋದಮ್ಮನೊಂದಿಗೆ ಮಾತನಾಡು" ಎಂದು ತನ್ನ ಒಪ್ಪಿಗೆಯನ್ನು ಕೊಟ್ಟಳು ನನ್ನಾಕಿ. ನಕ್ಕಳು ಶಾರದೆ!


ಊರಿನಲ್ಲೇ ಬೆಳೆದ ನಂದೀಶನಿಗೆ ಮನೆಯಲ್ಲೇ ದಿನ ಪೂರ್ತಿ ಕುಳ್ಳಲು ಕಷ್ಟವೇ. ಹಾಗಾಗಿ ಜನಸಂದಣಿಯ ನಡುವೆ, ಸರ್ಕಲ್‍ನ ಬಳಿ, ಶಾರದೆಯೊಟ್ಟಿಗೆ ಹೂವು ಮಾರುವುದು ಅವನಿಗೆ ಉತ್ಸಾಹದ ವಿಷಯ. ಅಲ್ಲಿಗೆ ಬರುವ ನಾನಾ ಬಗೆಯ ಗಿರಾಕಿಗಳನ್ನು ವಿಚಾರಿಸ್ತಾ, ಕೆಲವೊಮ್ಮೆ ಚೌಕಾಶಿ ಕೂಡ ಮಾಡ್ತಾ, ಸುತ್ತಲೂ ಇರುವ ಇನ್ನಿತರ ವ್ಯಾಪಾರಿಗಳೊಂದಿಗೆ ಮಾತನ್ನಾಡ್ತಾ ತನ್ನ ಸಮಯವನ್ನು ಕಳೆಯುತ್ತಿದ್ದ. ಉತ್ಸಾಹಸದ ಚಿಲುಮೆಯೇ ಸರಿ ಈ ಹುಡುಗ! ಅಂದು ರಾತ್ರಿ, ಶಾರದೆ ಮತ್ತು ನಂದೀಶ ಸರ್ಕಲ್ ಬಳಿ ಹೂವು ಮಾರಿ ವಾಪಾಸ್ಸಾಗುತ್ತಿದ್ದರು. ದಾರಿಯಲ್ಲಿ ಬರ‍್ತಾ ಶುಭಶ್ರೀ ಛತ್ರದಲ್ಲಿ ಮದುವೆಯೊಂದು ನಡೆಯುತ್ತಿರುವುದನ್ನು ಕಂಡರು. ’ಸುಸ್ವಾಗತ- ಜಯರಾಮ ಮತ್ತು ಗೀತ’ ಎಂದು ದೊಡ್ಡದಾಗಿ ಬರೆದು ಹೂವಿನ ಕಂಬವನ್ನು ಅಲಂಕಾರಗೊಳಿಸಿದ್ದರು. ಹೊರ ನಿಲ್ಲಿಸಿದ್ದ ಅನೇಕ ವಾಹನಳನ್ನು ನೋಡಿದರೆ, ಅಲ್ಲಿ ಸುಮಾರು ಜನ ನೆರೆದಿರುವುದು ಸ್ಪಷ್ಟವಾಗುತ್ತಿತ್ತು. ಊಟ ಮುಗಿಸಿ ಛತ್ರದಿಂದ ಹೊರಬರುತ್ತಿದ್ದ ಜನರ ವೇಷ-ಭೂಷಣಗಲನ್ನು ಕಂಡರೆ ಇದೊಂದು ಶ್ರೀಮಂತರ ಮದುವೆ ಎಂಬುದರಲ್ಲಿ ಸಂಶಯವೇ ಇರಲಿಲ್ಲ. ಇದನ್ನು ನೋಡಿದೊಡೆ ನಂದೀಶ "ಅಕ್ಕಾ, ಇದು ಯಾವ್ದೋ ಊರ ದೊಡ್ಡ ಜಮೀನ್ದಾರ್ರ ಮದ್ವೆ ಇರ‍್ಬೇಕು. ಎಷ್ಟು ಜನ ಸೇರಿದ್ದಾರೆ ನೋಡು. ಬಾ, ನಾವು ಒಳಗೆ ಹೋಗಿ ನೋಡ್ಕಂಡು ಬರುವ.." ಎಂದು ಛತ್ರದ ದ್ವಾರದ ದಿಕ್ಕಿನಲ್ಲಿ ನಡೆಯುವಂತೆ ಶಾರದೆಗೆ ಕೈ ಮಾಡಿ ತೋರಿಸಿದ. ಆಶ್ಚರ್ಯಗೊಂಡ ಶಾರದೆ "ಅಲ್ವೋ ನಂದೀಶ, ಅದ್ಹೇಗೋ ಹೋಗಕ್ಕೆ ಆಗ್ತದೆ? ನಮ್ಗೆ ಅವರ ಗುರುತು-ಪರಿಚಯ ಏನೂ ಇಲ್ಲ! ಸುಮ್‍ಸುಮ್ನೆ ಆ ಥರ ಹೋಗೋದು ತಪ್ಪು ಕಣೋ. ಮನೆಗೆ ನಡಿ" ಎಂದಳು. ತಾನು ಮಾತನಾಡಿದ್ದರಲ್ಲಿ ಯಾವ ತಪ್ಪನ್ನೂ ಕಾಣದ ನಂದೀಶ "ಇಷ್ಟ್ ಜನದಲ್ಲಿ ಯಾರಾದ್ರು ಒಬ್ರು ಗೊತ್ತಿದ್ದೇ ಇರ‍್ತಾರೆ! ಮದ್ವೆ ಆಗ್ತಿರೋರು ನಿನ್ ಹತ್ರ ಹೂವು ಕೊಳ್ಳೋವ್ರೇ ಆಗಿರ‍್ಬೋದು! ಒಳಗೆ ಹೋಗಿ ನೋಡುದ್ರೆ ತಾನೇ ವಿಷಯ ತಿಳಿಯೋದು" ಎಂದ. "ನಮ್ಗೆ ಯಾರೂ ಆಹ್ವಾನ ಕೊಟ್ಟಿಲ್ಲ ಅಂದ್ಮೇಲೆ ನಾವು ಅಲ್ಗೆ ಹೋಗೋದು ತಪ್ಪ್ ಆಗ್ತದೆ. ಸುಮ್ನೆ ನಡಿ ನನ್ ಜೊತೆ" ಎಂದಳು ಶಾರದೆ. "ಅಕ್ಕಾ ನನ್ ಮಾತ್ ಕೇಳು. ನಮ್ಮೂರ‍್ನಾಗೂ ನಾವ್ ಹುಡುಗ್ರು ಹಿಂಗೇ ಮಾಡೋದು. ಒಮ್ಮೆ, ಛತ್ರದ ಒಳಿಕ್ಕೆ ಹೋಗಿ ನೋಡುದ್ರೆ ನಮ್ಮ್ ಲೋಕೇಶನ ಅಣ್ಣನ ಮದುವೆ ನಡೀತಿತ್ತು! ಸುಮಾರು ಸಲ ಯಾರೂ ನಮ್ಮನ್ನ, ನೀವ್ಯಾರು-ಏನ್ ಕಥೆ ಅಂತ ಕೂಡ ಕೇಳಲ್ಲ. ಮದ್ವೆ ಆಗ್ತಿರೋರ‍್ನ ಹಾರೈಸಕ್ಕೆ ಬಂದೌರೆ ಅಂತ ಖುಶಿ ಪಡ್ತಾರೆ. ಸುಮ್ನೆ ಎರಡೇ ನಿಮಷ ಹೋಗಿ ಬರೋಣ ಬಾರಕ್ಕ. ನಿಮ್ಮೂರ‍್ನಾಗೆ ಮದ್ವೆ ಹೆಂಗ್ ಮಾಡ್ತರೆ ಅಂತ ಒಂದ್ ಕಿತ ನೊಡ್ತೀನಿ. ಬಾರಕ್ಕಾ.." ಎಂದು ನಂದೀಶ ಪೀಡಿಸತೊಡಗಿದ. ನಂದೀಶನ ಮಾತಿಗೆ ಕರಗಲೇ ಬೇಕಾದ ಶಾರದೆ "ಸರಿ ನಡಿ. ನೋಡಿ, ಬೇಗ ಬರೋಣ" ಎಂದಳು.


ಛತ್ರದ ಹೊರಗೆ ಹೂ ಕುಂಡಗಳನ್ನು, ತಾಮ್ರದ ಶಿಲೆಗಳನ್ನು ಆಕರ್ಷಿಣೀಯವಾಗಿ ಕಾಣುವಂತೆ ಇಟ್ಟಿದ್ದರು. ಛತ್ರದ ಬಾಗಿಲನ್ನು ಬಣ್ಣಬಣ್ಣದ ಹೂಗಳಿಂದ ಅಲಂಕರಿಸಿದ್ದರು. ಒಳಗಡೆ ಮೈಸೂರು ಅನಂತಸ್ವಾಮಿಯವರ ತಂಡದವರಿಂದ ಹಾಡಿನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮದುವೆಯ ಮಂಟಪವನ್ನು ಊರಿನ ಜಾತ್ರೆಯ ರಥವನ್ನು ಅಲಂಕರಿಸುವಂತೆ ಅದ್ಭುತವಾಗಿ ಶೃಂಗಾರಗೊಳಿಸಿದ್ದರು . ಗಂಡು-ಹೆಣ್ಣು ಇಬ್ಬರೂ ಮಂಟಪದ ಮೇಲೆ ನಿಂತು ಹರಸಲು ಬಂದ ಬಂಧು ಮಿತ್ರರನ್ನು ಮಾತನಾಡಿಸುತ್ತಿದ್ದರು. ಜೊತೆಗೆ, ಫೋಟೋ ಹಿಡಿಯಲೆಂದು ಮೂರ‍್ನಾಲ್ಕು ಜನ ನಿಂತಿದ್ದರು. ಬಾಗಿಲಿನಿಂದಲೇ ಇವೆಲ್ಲವನ್ನೂ ಕಂಡು ನಂದೀಶ-ಶಾರದೆ ಚಕಿತರಾದರು. ಬಾಗಿಲಿನ ಒಳ ನಡೆಯುತ್ತಿದ್ದಂತೆ ಹೆಣ್ಣುಮಕ್ಕಳಿಬ್ಬರು ಮೈಮೇಲೆ ಪನ್ನೀರನ್ನು ಚಿಮುಕಿಸಿದರು. ಬಟ್ಟೆಯ ಮೇಲೆ ಬಿದ್ದ ಎರಡು ತೊಟ್ಟಿನ ವಾಸನೆಯನ್ನು ಕಂಡು ನಂದೀಶ "ಅಕ್ಕಾ ಏನ್ ಘಮಘಮ ಅಂತಿದೆ ನೋಡು" ಎನ್ನುತ್ತಾ ಶಾರದೆಯೆಡೆ ತನ್ನ ಅಂಗಿಯನ್ನು ಬೆಟ್ಟು ಮಾಡಿ ತೋರಿಸಿದ. ಆ ಹೆಣ್ಣು ಮಕ್ಕಳ ಜೊತೆಗಿದ್ದ ಮತ್ತಿಬ್ಬರು ಇವರ ಸಾಧಾರಣ ಬಟ್ಟೆಗಳನ್ನು ಕಂಡು ಕೊಂಚ ಆಶ್ಚರ್ಯಗೊಂಡರೂ, ಗುಲಾಬಿ ಹೂವನ್ನು ಶಾರದೆ-ನಂದೀಶನಿಬ್ಬರಿಗೂ ಕೊಟ್ಟರು.


ಸನಿಹದಿಂದ ಕಾಣಲು, ಗಂಡು-ಹೆಣ್ಣು ಇನ್ನೂ ವಿಜೃಂಭಿಸುತ್ತಿದರು! ಮದುವೆ ಹೆಣ್ಣು ಮಹಾರಾಣಿಯಂತೆ ಶೋಭಿಸುತ್ತಿದ್ದಳು. ಆಕೆ ತೊಟ್ಟ ಸೀರೆ- ಧರಿಸಿದ ಒಡವೆಗಳ ವೈಪರಿಯನ್ನು ನೋಡಿದರೆ, ಅವಳು ಮಹಾಲಕ್ಷ್ಮಿಯೇ ಇರಬೇಕೆಂದು ಏಣಿಸುವಷ್ಟು ಶೃಂಗಾರಗೊಂಡಿದ್ದಳು. ಸಾಕ್ಷಾತ್ ಕುಬೇರನೇ ಈ ಮದುವೆ ಮಾಡಿಸುತ್ತಿದ್ದನೋ ಏನೋ! ಈ ವೈಭೋಗವನ್ನು ಕಂಡು ದಿಬ್ಬೆರಗಾಗಿ ನಿಂತಿದ್ದ ಶಾರದೆ-ನಂದೀಶನ ಹಿಂದಿನಿಂದ ಭಟ್ಟರೊಬ್ಬರು ಬಂದು "ಊಟದ ಪಂಕ್ತಿ ಖಾಲಿ ಆಯ್ತು. ಇನ್ನೂ ಊಟ ಮಾಡದಿರುವವರು ಕೆಳಗೆ ನಡೀರ‍ಿ. ಏನಪ್ಪಾ ಹುಡುಗ ನಿನ್ ಊಟ ಆಯ್ತಾ?" ಎಂದು ನಂದೀಶನನ್ನು ಕೇಳಿದರು. ನಂದೀಶ ತಲೆಯಾಡಿಸಿದ. "ಮತ್ತೆ ನಡೀ ಕೆಳಗೆ. ಇಲ್ಲಾಂದ್ರೆ ಪಂಕ್ತಿ ಬೇಗ ಖಾಲಿ ಆಗ್ತದೆ" ಎನ್ನುತ್ತಾ ಕೆಳಗೆ ನಡೆಯುವ ಮೆಟ್ಟಿಲನ್ನು ತೋರಿಸಿದರು. ನಂದೀಶ ಶಾರದೆಯೆಡೆ ನೋಡಿ, ಕೆಳಗೆ ಹೋಗುವಂತೆ ಸನ್ನೆ ಮಾಡಿ, ಅವಳ ಕೈ ಹಿಡಿದು ಮೆಟ್ಟಿಲೆಡೆ ನಡೆದ. ಶಾರದೆಗೂ ಒಲ್ಲೆಯೆನ್ನಲು ಮನಸ್ಸಾಗಲಿಲ್ಲ. ಹಿನ್ನಲೆಯಲ್ಲಿ ಹೊಂಬಿಸಿಲು ಚಿತ್ರದ "ಜೀವ ವೀಣೆ ನೀಡು ಮಿಡಿತದ ಸಂಗೀತ.." ಎಂಬ ಹಾಡು ಸುಮಧುರವಾಗಿ ಮೂಡಿಬರುತ್ತಿತ್ತು. ಮೆಟ್ಟಿಲನ್ನು ಇಳಿಯುವ ಮೊದಲು ಶಾರದೆ ಮಂಟಪದೆಡೆ ಒಮ್ಮೆ ನೋಡಿ "ಆ ದೇವ್ರು ನಿಮ್ಮ ದಾಂಪತ್ಯವನ್ನು ಚೆನ್ನಾಗಿ ಇಟ್ಟಿರಲಿ" ಎಂದು ಹರಸುತ್ತಾ ದೇವರನ್ನು ನೆನೆದಳು.


ಕೆಳಗೆ ನಡೆದು, ಕೈ ತೊಳೆದು, ಊಟದ ಎಲೆಯ ಮೇಲೆ ನೀರು ಚಿಮುಕಿಸಿ-ಶುಭ್ರಗೊಳಿಸಿ, ಊಟ ಬಡಿಸುವವರಿಗಾಗಿ ಕಾಯ್ದರು. ಇಂತಹ ವೈಭೋಗವನ್ನು ತನ್ನ ಊರಿನಲ್ಲಿ ಕಾಣದ ನಂದೀಶ "ಅಕ್ಕಾ, ಇವ್ರು ನಮ್ಮ ಊರ ಜಮೀನ್ದಾರ್ರಿಗಿಂತ ದೊಡ್ಡವ್ರು ಇರ‍್ಬೇಕು. ಎಷ್ಟ್ ಚೆನ್ನಾಗಿ ಏರ್ಪಾಟು ಮಾಡೌರೆ ಅಲ್ವಾ!? ಇವತ್ತು ಮೈಸೂರಿನ ಅರ್ಧ ಮಂದಿ ಇಲ್ಲೇ ಊಟ ಮಾಡ್ತಾರೆ ಅನ್ನಿಸ್ತದೆ" ಎಂದು ತನ್ನ ಆಶ್ಚರ್ಯವನ್ನು ವ್ಯಕ್ತ ಪಡಿಸಿದ. "ಹೌದೋ, ಯಾರೋ ದೊಡ್ಡ ಜನಾನೇ ಇರ‍್ಬೇಕು. ನಮ್ ತಾತಾನೂ ಒಮ್ಮೊಮ್ಮೆ ನಮ್ಮನ್ನ ಶುಭ ಕಾರ್ಯಗಳಿಗೆ ಕೊಂಡೊಯ್ಯುತ್ತಿದ್ದರು. ಆದ್ರೆ ಯಾವೂ ಇಷ್ಟ್ ಮಹದಾಗಿರಲಿಲ್ಲ. ಏನೇ ಆಗ್ಲಿ, ಇಷ್ಟ್  ಜನಕ್ಕೆ ಅನ್ನ ಸಂತರ್ಪಣೆ ಮಾಡ್ತೌರೆ. ದೇವ್ರು ಅವರ ಹೊಟ್ಟೇನ ತಣ್ಣಗೆ ಇಟ್ಟಿರ‍್ಲಿ" ಎಂದಳು ಶಾರದೆ. "ಓಹ್! ಬಿಳಿ ಮೀಸೆ ತಾತಾನಾ? ಅವ್ರು ಹೋಳಿಗೆ ತುಂಬಾ ಚೆನ್ನಾಗಿ ಮಾಡ್ತಿದ್ರು ಅಂತ ನಮ್ಮತ್ತೆ.." ಎಂದು ನಂದೀಶ ಹೇಳುತ್ತಿದ್ದಂತೆ ಉಪ್ಪು, ಉಪ್ಪಿನಕಾಯಿ, ಕೋಸಂಬರಿ ಇತ್ಯಾದಿಗಳನ್ನು ಬಡಿಸಲು ಭಟ್ಟರು ಮುಂದಾದರು. ದಿನವೂ ಹುಳಿ-ಅನ್ನ ತಿನ್ನುತ್ತಿದ್ದ ಶಾರದೆಗೆ ಇವತ್ತು ಕೊಂಚ ವಿಶೇಷ ದಿನವೇ ಸರಿ! ಎಲೆ ಪೂರ್ತಿಯಾಗಿ ತುಂಬುವಷ್ಟು ಅಡುಗೆಯನ್ನು ಮಾಡಿಸಲಾಗಿತ್ತು. ವಿವಿಧ ಬಗೆಯ ಸಿಹಿ, ಪಲ್ಯಗಳು, ಶರಬತ್ತು, ಚಿರೋಟಿ, ಉತ್ತರ ಭಾರತದ ಕೆಲ ತಿನಿಸುಗಳು! ಹೊಟ್ಟೆಯ ಕಿಂಚಿತ್ತು ಭಾಗವೂ ಖಾಲಿಯಿರದಷ್ಟು, ತುಂಬಿ ಹೋಗುವಂತೆ ಊಟದ ಏರ್ಪಾಟು ಆಗಿತ್ತು.


ನಂದೀಶನು ಚೋಟುದ್ದ ಇದ್ದ, ಮೀಸೆ ಬೇರೆ ಚಿಗುರಿರಲಿಲ್ಲ. ಅದಕ್ಕೆ, ಕೊನೆಯಲ್ಲಿ ತಾಂಬೂಲ ಕೊಡುವವರು ನಂದೀಶನಿಗೆ ತಾಂಬೂಲದ ಚೀಲವನ್ನು ಕೊಡದೇ ಮುನ್ನಡೆಯಲು, ನಂದೀಶ "ಅಣ್ಣಾ, ಇಲ್ಲಿ ನಾನೂ ಕೂತಿದ್ದೀನಿ! ನಂಗೂ ಒಂದ್ ಚೀಲ ಕೊಡಿ. ಚಿಕ್ಕವ್ನು ಅಂತ ಬೇಕಾದ್ರೆ ಸಣ್ಣ ಚೀಲಾನೇ ಕೊಡಿ, ನಡೀತದೆ" ಎಂದ. ಚೀಲವು ಸಿಕ್ಕಿದೊಡನೆ, ತಾಂಬೂಲದ ತೆಂಗಿನಕಾಯಿಯನ್ನು ಹೊರತೆಗೆದು, ಬಡಿಸಿದ್ದನ್ನು ಪೂರ್ತಿ ತಿನ್ನಲಾಗದ ನಂದೀಶ, ಮಿಕ್ಕಿದ್ದನ್ನೆಲ್ಲಾ ಚೀಲದೊಳಗೆ ಪುಸುಕ್ಕೆನುವಷ್ಟರಲ್ಲಿ ಕೆಳಗಿಳಿಸಿದ. ಕೈ ತೊಳೆಯುತ್ತಾ, ಶಾರದೆ "ಯಾಕೋ! ಬೇಡಾಂದ್ರೆ ಎಲೆಯಲ್ಲೇ ಬಿಡು. ಅದೇನು ಚೀಲಕ್ಕೆ ಹಾಕ್ಕೋತ್ಯಾ? ಇಷ್ಟು ತಿಂದದ್ದು ಸಾಲ್ದ? ಆತಿ ಆಸೆ ಯಾಕೋ ನಿಂಗೆ?" ಎಂದಳು ಕಠಿಣವಾಗಿ. ಅದಕ್ಕೆ ನಂದೀಶ "ಅದು ಯಾಕೇಂತ ಆಮೇಲೆ ಹೇಳ್ತೀನಿ" ಎನ್ನುತ್ತಾ ತೊಳೆದ ಕೈಯನ್ನು ತನ್ನ ಚಡ್ಡಿಗೇ ಒರಸಿಕೊಂಡ. ಭೋಜನ ಮುಗಿಸಿ ಶಾರದೆ-ನಂದೀಶ ಬಾಳೆಹಣ್ಣು ತಿನ್ನುತ್ತಾ ಛತ್ರದಿಂದ ಹೊರಬಂದರು. ಜನರು ಇನ್ನೂ ಬರುತ್ತಲೇ ಇದ್ದರು!


ಮನೆಗೆ ಬರುವ ದಾರಿಯಲ್ಲಿ ನಡೆಯುತ್ತ ಬರಬೇಕಾದರೆ, "ಯಪ್ಪಾ, ನಡ್ಯಕ್ಕೆ ಆಗ್ತಿಲ್ಲ. ಇನ್ನೂ ಸ್ವಲ್ಪ ತಿಂದಿದ್ರೆ ಹೊಟ್ಟೇಲಿ ತೂತ್ ಆಗ್ತಿತ್ತು ಅಷ್ಟೇ. ಇನ್ನು ಮೂರು ದಿನ ಊಟ ಮಾಡಂಗೇ ಇಲ್ಲ. ಇಲ್ಲೇ, ರಸ್ತೆಯ ಬದಿಯಲ್ಲಿ ಸ್ವಲ್ಪ ಕುಳ್ಳೋಣ. ನನ್ ಕೈಲಿ ಇನ್ನು ನಡೆಯಲಿಕ್ಕೆ ಆಗಲ್ಲಪ್ಪಾ.." ಎಂದು ನಂದೀಶ ರಾಗವಾಡತೊಡಗಿದ. "ಆಗ್ಲೇ ಎಷ್ಟು ಹೊತ್ತಾಯ್ತು. ಅಜ್ಜಿ ಬೈತಾರೆ ಈಗ. ಘಾಬ್ರಿ ಬೇರೆ ಆಗಿರ‍್ತಾರೆ. ಅಷ್ಟು ತಿಂದ್ಮೇಲೂ ಚೀಲಕ್ಕೆ ಯಾಕೋ ಹಾಕ್ಕೊ ಬೇಕಿತ್ತು? ಸುಮ್ನೆ ನಡಿ, ಕುಳ್ಳಲು ಸಮಯ ಇಲ್ಲ" ಎಂದಳು ಶಾರದೆ. ಬೇರೆ ದಾರಿಯಿಲ್ಲದೆ ನಂದೀಶ ಕಾಲು ಹಾಕಿದ. ಕೊಂಚ ಹೊತ್ತು ಹಾಗೆ ಮಾತನಾಡುತ್ತಾ ನಡೆದರು. ಸರಸ್ವತಿಪುರಕ್ಕೆ ಬರಲು ಬಸ್ಸು ನಿಲ್ದಾಣದಿಂದ ಬಲ ತಿರುಗಲು, ನಂದೀಶ "ಅಕ್ಕಾ, ಒಂದು ನಿಮಿಷ. ಆ ಚೀಲ ಕೊಡಿಲ್ಲಿ" ಎಂದು ಕೈ ಒಡ್ಡಿದ. ಇದರಿಂದ ಕೊಂಚ ಆಶ್ಚರ್ಯಗೊಂಡ ಶಾರದೆ ಏನೂ ಉತ್ತರಿಸದೇ ಸುಮ್ಮನೆ ಮುನ್ನಡೆದಳು. "ಕೊಡಕ್ಕಾ ಇಲ್ಲಿ" ಎಂದು ನಂದೀಶ ಪುನಃ ಕೇಳಿದ. "ಯಾಕೋ? ಆಗ್ಲೆ ಹೊಟ್ಟೆ ಹಸಿವಾ? ನೀನು ಹೇಳ್ದಂಗೆ ಕುಣಿತಾಯ್ದ್ರೆ ಅಷ್ಟೇ, ಮುಗೀತು ಕಥೆ. ಸುಮ್ನೆ ನಡೀ ಮನೆಗೆ" ಎಂದು ಸಿಟ್ಟಿನಿಂದ ಉತ್ತರಿಸಿದಳು. "ಏ, ಕೊಡಕ್ಕಾ ಇಲ್ಲಿ.." ಎನ್ನುತ್ತಾ ಚಕ್ಕನೆ ಶಾರದೆಯ ಕೈಯ್ಯಿಂದ ಚೀಲವನ್ನು ಕಸಿದುಕೊಂಡ. ಶಾರದೆ, ಇವನ ಈ ಚೇಷ್ಟೆಯಿಂದ ರೇಗುವ ಸ್ಥಿತಿಗೆ ಬಂದಳು. ಏನನ್ನೂ ಲೆಕ್ಕಿಸದೇ, ನಂದೀಶನು ಬಸ್ಸು ನಿಲ್ದಾಣದ ಬಳಿ ಕೂತಿದ್ದ ಭಿಕ್ಷುಕರ ಬಳಿ ಹೋದ!


ತಮ್ಮ ದಿನದ ಡ್ಯೂಟಿಯನ್ನು ಮುಗಿಸಿ ಅಲ್ಲಿದ್ದ ಇಬ್ಬರು ಭಿಕ್ಷುಕರು ನಿದ್ರೆಗೆ ಹೋಗುವಂತಿದ್ದರು. ಒಬ್ಬ ಮುದುಕನಾದರೆ, ಮತ್ತೊಬ್ಬ ನಂದೀಶನಿಗಿಂತ ಚಿಕ್ಕವನಂತೆ ಕಾಣುವ ಹುಡುಗ. ನಂದೀಶ ಅವರ ಬಳಿ ಚೀಲವಿಟ್ಟುಕೊಂಡು ಹೋಗಲು, ಮುದುಕಪ್ಪ ಆಸೆಯಿಂದ ಎದ್ದು ಕೂತ! ನಂದೀಶ ಅವರನ್ನು ಕುರಿತು "ಏನ್ ತಾತ ಊಟ ಆಯ್ತಾ? ಏನೋ ನುಗ್ಗೆಕಾಯಿ, ಏನ್ ನಿನ್ ಹೆಸ್ರು?" ಎಂದು ಮಾತನಾಡಿಸತೊಡಗಿದ. ಶಾರದೆ ಬಾಯಿ ಬಿಟ್ಟು ನೋಡತೊಡಗಿದಳು! "ಊಟ ಇನ್ನೂ ಆಗಿಲ್ಲಪ್ಪ. ಇವತ್ತು ದಿನಾನೇ ಚೆನ್ನಾಗಿಲ್ಲ. ಬೆಳಿಗ್ಗೆಯಿಂದ ಯಾರೂ ಸರ‍್ಯಾಗಿ ಕಾಸು ಹಾಕಿಲ್ಲ. ಬೇಕಂದ್ರೆ ಈ ಖಾಲಿ ತಟ್ಟೇನ ನೋಡು" ಎನ್ನುತ್ತಾ ಮುದುಕ ತನ್ನ ತಟ್ಟೆಯನ್ನು ಸಾಕ್ಷಿಗೆ ಹಿಡಿದ. ಬಹುಶಃ ಅವನು ನಿಜವೇ ಹೇಳುತ್ತಿದ್ದ ಅನ್ನಿಸ್ತದೆ. ಅವನ ದನಿಯಲ್ಲಿ ಶಕ್ತಿ ಕುಂದಿತ್ತು. "ತೆಗೋ, ಇವತ್ತು ನೀನೂ ಮದ್ವೆ ಊಟ ಮಾಡು" ಎನ್ನುತ್ತಾ ತನ್ನ ಚೀಲವನ್ನು ಮುದುಕನಿಗೆ ಕೊಟ್ಟ. ಅಲ್ಲೇ ಮೌನವಾಗಿ ನಿಂತಿದ್ದ ಆ ಭಿಕ್ಷುಕ ಹುಡುಗ ಕುತೂಹಲದಿಂದ-ಆಸೆಯಿಂದ ಚೀಲವನ್ನು ನೋಡಲು ಮುಂದೆ ಬಂದ. ಪಾಪ, ಅವನ ಶರೀರ ಅಸ್ಥಿಪಂಜರವೇ ಸರಿ! ಚೀಲದೊಳಗೆ ಊಟವನ್ನು ಕಂಡು ಮುದುಕಪ್ಪ ಮುಗುಳ್ನಗು ಬೀರಿದ. ಬಾಯಿಯಲ್ಲಿ ಮೂರ‍್ನಾಲ್ಕೇ ಹಲ್ಲಿರುವುದು ಗೋಚರಿಸುತ್ತಿತ್ತು! ಆದರೂ, ಅಂತಿಂತಹ ನಗುವಲ್ಲವದು. ಧನ್ಯತೆ-ತನ್ಮಯತೆ ತುಂಬಿದ ನಗುವದು.


ಖುಶಿಗೊಂಡ ಆ ಹುಡುಗನು "ನಾನು ಬಸವ ಅಂತ್ಹೇಳಿ. ಇವ್ರು ನಮ್ ತಾತಪ್ಪ" ಎಂದ. "ಸರಿ. ಇಬ್ರೂ ಊಟ ಮಾಡ್ಕೊಳ್ಳಿ. ನಿಮ್ ಜೊತೆ ಇಲ್ಲಿ ಇನ್ನೊಬ್ರು ಇರ‍್ತಿದ್ರು ಅಲ್ವಾ? ಎಲ್ ಹೋದ್ರು ಅವ್ರು" ಎಂದು ನಂದೀಶ ಕೇಳಿದ. "ಅವ್ಳು ಬಸ್ವನ ಅವ್ವ. ಇಲ್ಲೇ ಪಕ್ಕದ ರಸ್ತೇಲಿ ಯಾವ್ದಾದ್ರು ಮನೆಯಿಂದ ಊಟ ಕೇಳಿ ತರ‍್ತೀನಿ ಅಂತ ಹೋಗೌಳೆ. ಇನ್ನೇನ್ ಬರ‍್ತಾಳೆ. ಆ ದೆವ್ರು ನಿನ್ನ ಚೆನ್ನಾಗಿ ಇಟ್ಟಿರ‍್ಲಪ್ಪ" ಎನ್ನುತ್ತಾ ಕೈ ಮುಗಿದ ಮುದುಕಪ್ಪ. "ಸರೀ. ನಾನ್ ಬರ‍್ತೀನಿ. ಅವ್ಳು ನಮ್ಮಕ್ಕ ಶಾರದೆ ಅಂತ. ಅವ್ಳ್ ಒಟ್ಟಿಗೇ ನಾನು ಮದ್ವೆಗೆ ಹೋದದ್ದು" ಎನ್ನುತ್ತಾ, ಸ್ವಲ್ಪ ಹಿಂದೆ ನಿಂತಿದ್ದ ಶಾರದೆ ಬಳಿ ನಡೆಯುತ್ತಾ, ಅಲ್ಲಿಂದ ಹೊರಟ. ನಂದೀಶನ ನಿಷ್ಕಲ್ಮಷವಾದ ನಿಲುವನ್ನು ಕಂಡು ಶಾರದೆಗೆ ಆಶ್ಚರ್ಯವೂ ಅಯ್ತು-ಸಂತಸವೂ ಉಕ್ಕಿ ಬಂತು. ತನ್ನ ನಂದೀಶನ ಕುರಿತಾಗಿದ್ದ ಸಿಟ್ಟಿನ ಬಗ್ಗೆ ಮುಜುಗರವೂ ಎನಿಸಿತು. ಅದಕ್ಕೇ ಹೇಳುವುದು, ಮಕ್ಕಳ ಮನಸ್ಸು ಹಾಲಿನಂತೆ ಎಂದು! ಈ ಸಂಗತಿಯಿಂದ ನಂದೀಶ ಶಾರದೆಯ ಹೃದಯಕ್ಕೆ ಇನ್ನೂ ಸಮೀಪವಾದ.


ಇನ್ನೊಮ್ಮೆ, ಶಾರದೆ ಮತ್ತು ನಂದೀಶ ಸರ್ಕಲ್‍ನಿಂದ ಹಿಂದಿರುಗಿದರು. ನನ್ನಾಕಿ ಡಿ.ವಿ.ಗುಂಡಪ್ಪನವರ ’ಮಂಕುತಿಮ್ಮನ ಕಗ್ಗ’ದ ಪ್ರವಚನ ಕೇಳಲೆಂದು ಎದುರು ಮನೆಯ ರಾಧಮ್ಮನೊಂದಿಗೆ ಶ್ರೀರಂಗಪ್ಪನ ಹಾಲಿಗೆ ಹೋಗಿದ್ದಳು. ನನ್ನ ಫೋಟೋವಿನ ಮುಂದಿರುವ ದೀಪ ಆರಿ ಹೋಗಿದ್ದರಿಂದ, ಆ ದೀಪವನ್ನು ಹಚ್ಚಿ, ಅಕ್ಕಿಯನ್ನು ಒಲೆ ಮೇಲಿಟ್ಟು, ತನ್ನ ಕೂದಲನ್ನು ಬಾಚಲೆಂದು ಶಾರದೆ ನೆಲದ ಮೇಲೆ ಕೂತಳು. ಅತ್ತೆ ಮಾಡಿದ ಚಕ್ಲಿ- ಕೋಡ್ಬಳೆಯನ್ನು ತಿನ್ನುತ್ತಾ ನಂದೀಶ ನಮ್ಮ ಮನೆಯ ಒಳ ಬಂದ. ಬಂದವನೇ "ಏನಕ್ಕಾ, ತಲೆ ಬಾಚ್ಕೊತಿದ್ಯಾ? ಅತ್ತೆ ಚಕ್ಲಿ ಮಾಡೌರೆ ತೆಗೋ. ಬಾಚಣಿಗೆ ಇಲ್ಲಿ ಕೊಡು, ನಾನು ಬಾಚ್ತೀನಿ" ಎನ್ನುತ್ತಾ, ಚಕ್ಲಿ ಕೊಟ್ಟು, ಬಾಚಣಿಗೆಗೆ ಕೈ ಚಾಚಿದ. ಶಾರದೆ ಚಕ್ಲಿಯನ್ನು ಕಚ್ಚುತ್ತಾ "ಏನೋ? ನೀನು ತಲೆ ಬಾಚ್ತ್ಯಾ? ಬರ‍್ತದಾ ನಿಂಗೆ?" ಎಂದು ಕೇಳಿದಳು. "ಮತ್ತೇ. ನಂಗೆ ಎಲ್ಲಾ ಬರ‍್ತದೆ. ನಮ್ಮಮ್ಮನಿಗೂ ಒಮ್ಮೊಮ್ಮೆ ನಾನೇ ಬಾಚೋದು. ಒಂದ್ ಸಲ ಬಾಚಿಸಿಕೊಂಡು ನೋಡು" ಎಂದ. ಸರೀ ನೋಡುವ ಒಮ್ಮೆ ಎಂದು ಶಾರದೆ ಬಾಚಣಿಗೆಯನ್ನು ನಂದೀಶನಿಗೆ ಕೊಟ್ಟಳು.


ನಂದೀಶನು ತಲೆ ಬಾಚುತ್ತಾ ಮಾತಿಗಿಳಿದ. "ಅಕ್ಕಾ, ನಮ್ಮೂರ‍್ನಾಗೆ ಈ ಸಲ ದೀಪಾವಳಿ ಜೋರಾಗಿ ಮಾಡ್ತೀವಿ. ಅಪ್ಪ ನನ್ನ ಕರೆದುಕೊಂಡು ಹೋಗಲು ಬಂದಾಗ ಒಂದು ಗೋಣಿ ಚೀಲದ ತುಂಬಾ ಪಟಾಕಿ ಕೊಡಿಸಿ ಕೊಳ್ತೀನಿ. ಹೋದ ಬಾರಿ ಲೋಕೇಶ ಲಕ್ಷ್ಮಿ ಪಟಾಕಿ ಹೊಡಿತೀನಿ ಅಂತ ಹೋಗಿ ಮೂತೀನ ಹನ್ಮಂತನ ಥರ ಊದಿಸಿಕೊಂಡಿದ್ದ! ಅದ್ಕೇ ಅವನ್ನ ಇನ್ನೂ ಹನ್ಮಂತ ಅಂತಾನೇ ಕರಿತೀವಿ" ಎನ್ನುತ್ತಾ ನಗಲಾರಂಭಿಸಿದ. "ಆಮೇಲೆ. ಇನ್ನೇನ್ ಮಾಡ್ತ್ಯಾ ಈ ದೀಪಾವಳಿಗೆ?" ಎಂದು ಕೇಳಿದಳು ಶಾರದೆ. "ಅಮ್ಮ ಕಜ್ಜಾಯ ಮಾಡ್ತೀನಿ ಅಂದೌಳೆ. ನಂಗೆ, ನನ್ ತಮ್ಮ ನರಸಿಂಹನಿಗೂ ಹೊಸ ಬಟ್ಟೆ ಕೊಡಿಸ್ತಾರೆ! ಅಕ್ಕಾ, ನೀನು ಪಟಾಕಿ ಹೊಡಿತ್ಯಾ? ಹೊಸ ಬಟ್ಟೆ ಕೊಳ್ತ್ಯಾ?" ಎಂದು ನಂದೀಶ ತನ್ನ ಪ್ರಶ್ನೆಗಳನ್ನು ಮುಂದಿಟ್ಟ. ಹೊಸ ಬಟ್ಟೆ ಎಂದೊಡೆ ಶಾರದೆ ಸ್ವಲ್ಪ ಹೊತ್ತು ಮೌನವಾದಳು. "ಯಾಕಕ್ಕಾ? ಏನಾಯ್ತು? ಹೊಸ ಬಟ್ಟೆ ಆಗ್ಲೇ ಕೊಂಡಿದ್ಯಾ?" ಎಂದು ಕೇಳಿದ. "ಇಲ್ವೋ. ಇನ್ನೂ ಕೊಂಡಿಲ್ಲ. ದೀಪಾವಳಿ ಅಷ್ಟರಲ್ಲಿ ಹೇಗಾದ್ರು ಮಾಡಿ ಕಾಸು ಜೋಡಿಸಿದ್ರೆ ಕೊಳ್ಳಬಹುದು. ಹೊಸ ಲಂಗ-ದಾವಣಿ ಕೊಳ್ತೀನಿ ಆಗ. ಅದ್ಕೇ, ಈಗ ಸಂಜೆ ಹೊತ್ತು ಜಾಸ್ತಿ ಹೂವು ಮಾರ‍್ತಿರೋದು" ಎಂದು ಉತ್ತರಿಸಿದಳು ಶಾರದೆ. "ಓಹ್! ಸಂಜೆ ಜಾಸ್ತಿ ಹೂವು ಮಾರಿದ್ರೆ ಜಾಸ್ತಿ ಕಾಸು ಕೊಡ್ತಾರಾ?" ಎಂದು ಮರುಪ್ರಶ್ನಿಸಿದ ನಂದೀಶ. ಶಾರದೆ ತಲೆಯಾಡಿಸಿದಳು.


ಕೆಲಕ್ಷಣ ಯೋಚಿಸಿ, "ಹಾಗಾದ್ರೆ ಇನ್ನೂ ಹೆಚ್ಚಿಗೆ ಹೂವನ್ನು ಮಾರು. ಆಗ ಕಾಸು ಇನ್ನೂ ಬೇಗ ಜೋಡ್ಸಿ ಬಟ್ಟೆ ಕೊಳ್ಳಬಹುದು" ಎಂದು ತನ್ನ ಅಭಿಪ್ರಾಯವನ್ನು ಹೇಳಿದ. ಅದಕ್ಕೆ ಶಾರದೆ "ಅದ್ಹೇಗೋ ಆಗ್ತದೆ? ಈಗ್ಲೇ ಮನೆಗೆ ಬರೋದು ಎಂಟು ಘಂಟೆ ಆಗ್ತದೆ. ಇನ್ನೂ ಹೆಚ್ಚು ಮಾರ‍್ಬೇಕು ಅಂದ್ರೆ ನಂಗೇನು ನಾಲ್ಕು ಕೈ ಇದ್ಯೇನೊ" ಎಂದು, ಚಕ್ಲಿಗಳನ್ನು ತುಂಬಿಕೊಂಡ ತನ್ನ ಕೈಯನ್ನು ಮುಂದೆ ಮಾಡಿ ತೋರಿಸಿ ನಕ್ಕಳು. ತಲೆ ಬಾಚುತ್ತಲೇ ಸ್ವಲ್ಪ ಹೊತ್ತು ಸುಮ್ಮನಿದ್ದ ನಂದೀಶ "ಅಕ್ಕಾ, ಹಾಗಿದ್ರೆ ಒಂದು ಕೆಲಸ ಮಾಡೋಣ. ಸರ್ಕಲ್ ಬಳಿ ಕೆಲ ಹುಡುಗ್ರು ಬುಟ್ಟೀಲಿ ಹೂವು ಮಾರ‍್ತಾರೆ. ಇನ್ಮೇಲೆ ನೀನು ಇನ್ನೂ ಹೆಚ್ಚು ಹೂವು ಈಸ್ಕೊ. ನಾನು ಬುಟ್ಟೀಲಿ ಅಲ್ಲೇ ಹೂವು ಮಾರ‍್ತೀನಿ. ಹೇಗಿದ್ರೂ ನಾನು ಚೌಕಾಶಿ ಚೆನ್ನಾಗಿ ಮಾಡ್ತೀನಿ ಅಂತ ಪಕ್ಕದ ಅಂಗಡಿಯ ಅಯ್ಯಪ್ಪ ಹೇಳ್ತಾ ಇರ‍್ತಾನೆ! ನಾಳೆಯಿಂದ ಹಾಗೇ ಮಾಡುವ. ಆಗ ಬೇಗ ಕಾಸು ಕೂಡಿಸಬಹುದು" ಎಂದು ತನ್ನ ಉಪಾಯವನ್ನು ಹೇಳಿದ. "ಏನು? ನಿನ್ ಕೈಲಿ ಕೆಲ್ಸ ಮಾಡ್ಸೋದಾ? ವಿಷಯ ನಿಮ್ ಅತ್ತೆಗೆ ಗೊತ್ತಾದ್ರೆ ಅಷ್ಟೇ?" ಎಂದು ಶಾರದೆ ನಿರಾಕರಿಸಿದಳು. "ನಮ್ಮಪ್ಪ ಸಂತೇಲಿ ಬೆಳೆ ಮಾರ‍್ಬೇಕಾದ್ರೆ ಸುಮಾರು ಸಲ ನನ್ನೇ ಮಾರಲು ಬಿಟ್ಟು ಹೋಗ್ತಾರೆ. ಅಲ್ಲೇ ನಾನು ಚೌಕಾಶಿ ಕಲೆತದ್ದು. ಬೇಕಂದ್ರೆ ನಮ್ ಅತ್ತೇನ ಕೇಳು. ಹೇಗಿದ್ರು ನೀನು ಅಲ್ಲೇ ಇರ‍್ತ್ಯಲ್ಲ, ನನ್ ಮೇಲೆ ಒಂದು ಕಣ್ಣಿಟ್ಟಿರು" ಎಂದು ನಂದೀಶ ಸಮಜಾಯಿಷಿ ಮಾತನಾಡಿದ. ಸ್ವಲ್ಪ ಹೊತ್ತು ಯೋಚಿಸಿದ ಶಾರದೆ "ಸರಿ. ನಾನು ಯಶೋದಮ್ಮನಿಂದ ಇನ್ನೂ ಜಾಸ್ತಿ ಹೂವು ತರ‍್ತೇನೆ. ನಾಳೆಯಿಂದ ಹಾಗೇ ಮಾಡುವ. ಆದ್ರೆ ಹುಷಾರಪ್ಪ ನೀನು.." ಎಂದು ಶಾರದೆ ತನ್ನ ಒಪ್ಪಿಗೆಯನ್ನು ಸೂಚಿಸಿದಳು. ತಲೆ ಬಾಚಿ ಮುಗಿಸಿದ ನಂದೀಶ, ಕೂದಲಿಗೆ ಎರಡು ಪಿನ್ನುಗಳನ್ನು ಏರಿಸಿ "ನೋಡಕ್ಕಾ, ನಿನ್‍ಕಿಂತ ಎಷ್ಟು ಚೆನ್ನಾಗಿ ಬಾಚ್ತೀನಿ ನಾನು" ಎಂದು ತನ್ನನ್ನು ತಾನೇ ಕೊಚ್ಚಿಕೊಂಡ.


ಮುಂದಿನ ಮೂರ‍್ನಾಲ್ಕು ವಾರಗಳು ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಮುಗಿದು ಹೋದವು. ದಸರೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದವು. ಶಾರದೆ ಈ ತಿಂಗಳು ಮಿಕ್ಕ ತಿಂಗಳಿಗಿಂತ ನೂರಾ ಅರವತ್ತು ರೂಪಾಯಿ ಹೆಚ್ಚಾಗಿ ಸಂಪಾದಿಸಿದ್ದಳು. ನಂದೀಶ ಚೌಕಾಶಿ ಮಾಡ್ತಾ ತನ್ನ ಜೊತೆಗಿದ್ದ ಮಿಕ್ಕ ಹುಡುಗರಿಗೂ ಚೌಕಾಶಿಯ ಪಾಠವನ್ನು ಹೇಳಿಕೊಡುತ್ತಿದ್ದ! ಇನ್ನು ಕೆಲವು ಗಿರಾಕಿಗಳು ಇವನ ಮಾತಿನ ವರಸೆ ಕೇಳುತ್ತಲೇ ಹೂವು ಕೊಳ್ಳುತ್ತಿದ್ದರು. ಅದೇನೇ ಇದ್ದರೂ, ಆ ತಾಯಿ ಚಾಮುಂಡಿಯೇ ಬಹುಶಃ ನಂದೀಶನನ್ನು ಶಾರದೆಯ ಬಾಳಿನಲ್ಲಿ ತಂದಳೆನಿಸುತ್ತದೆ. ಶಾರದೆಯ ಆಸೆಯ ಸಸಿಗೆ ನೀರು ಹಾಕಿ ಹಾರೈಸೌಳೆ ಆ ತಾಯಿ. ಶಾರದೆಯ ದಿನದಲ್ಲಿ ಕೊನೆಗೂ ಮಾತು ತುಂಬೈತೆ, ನಗು ಮಿನುಗೈತೆ. ಅವಳ ನಗುವಿನಿಂದ ನಾನೂ ಸಂತಸ ಪಡ್ತೀನ್ರಿ. ಈ ಸತ್ತವನೂ ನಗ್ತಾನೆ ಅವಳ ಆನಂದವನ್ನು ಕಂಡು! ಬಾಳು ಹೀಗೇ ಇದ್ರೆ ಎಷ್ಟು ಹಿತಕರ ಅನ್ನಿಸ್ತದೆ..


ಸರಸ್ವತಿಪುರದಲ್ಲಿರುವ ಮಂಜಪ್ಪನ ಮೈದಾನದಲ್ಲಿ ತಿಂಗಳ ಸಂತೆ ಇವತ್ತು. ಮಕ್ಕಳಿಗೆಂದು ವಿವಿಧ ಆಟಗಳಿವೆ ಅಲ್ಲಿ. ಕುದೆರೆಯ ಆಟ, ಸುತ್ತುವ ದೊಡ್ಡಚಕ್ರದ ಆಟ, ಗಾಳಿಪಟ ಹಾರಿಸುವುದು, ಚಕ್ಲಿ-ಕೋಡುಬಳೆ-ಐಸ್‍ ಕ್ಯಾಂಡಿ- ಇನ್ನೂ ಅನೇಕ ತಿನಿಸುಗಳು, ಕರಡಿ ಕುಣಿತ- ಇವೆಲ್ಲವೂ ಈ ಸಂತೆಯಲ್ಲಿ ಸಾಮಾನ್ಯ. ಜಯಮ್ಮ, ನಂದೀಶ ಮತ್ತು ಶಾರದೆ ಇಂದು ಸಂತೆಗೆ ಹೊರಟರು.


ಮೂರು ರೂಪಾಯಿ ಕೊಟ್ಟು, ಗಾಳಿಪಟವನ್ನು ಕೊಂಡು, ಸಂಜೆಯ ತಂಪಿನಲಿ, ಮುಳುಗುವ ನೇಸರನ ಹಿನ್ನಲೆಯಲಿ, ಇಬ್ಬರೂ ಗಾಳಿಪಟವನ್ನು ಹಾರಿಸುತ್ತಾ ನಲಿದರು. ಗಾಳಿಪಟವು ಮೇಲೇರಿದಂತೆ ನಂದೀಶನ ನಗೆಯ ಕೂಗೂ ಹೆಚ್ಚತೊಡಗಿತು. ಶಾರದೆಯೂ ಅವನ ಗಾಳಿಪಟದ ಎತ್ತರಕ್ಕೆ ತನ್ನದನ್ನೂ ಹಾರಿಸಲು ಯತ್ನಿಸಿದಳು. ಆದರೂ ನಂದೀಶನೇ ಕೊನೆಯಲ್ಲಿ ಗೆದ್ದ. "ನೀನೇ ಗೆದ್ದೆ ಬಿಡೋ. ಎಷ್ಟ್ ಚೆನ್ನಾಗಿ ಹಾರಿಸ್ತ್ಯೋ!" ಎಂದಳು ಶಾರದೆ. "ಅಲ್ವಾ ಮತ್ತೆ! ಊರ‍್ನಲ್ಲಿ ವಾರಕ್ಕೊಮ್ಮೆ ಗಾಳಿಪಟ ಬಿಡ್ತೀವಿ. ನಾನೇ ಯಾವಾಗ್ಲು ಗೆಲ್ಲೋದು" ಎಂದು ನಂದೀಶ ತನ್ನ ಸಾಧನೆಯನ್ನು ಹೆಮ್ಮೆಯಿಂದ ಹೇಳಿಕೊಂಡ. ನಂದೀಶ ಹಠ ಮಾಡಿ ತನಗೂ ಮತ್ತು ಶಾರದೆಗೂ ಒಂದೊಂದು ಬಣ್ಣದ ಕನ್ನಡಕ ಕೊಡಿಸಿಕೊಂಡ. ಇಬ್ಬರೂ ಬಣ್ಣದ ಕನ್ನಡಕವನ್ನು ಹಾಕಿಕೊಂಡು, ಐಸ್ ಕ್ಯಾಂಡಿ ಚೀಪುತ್ತಾ ದೊಡ್ಡಚಕ್ರದಲ್ಲಿ ಕೂತರು. ಚಕ್ರ ತಿರುಗಿದಂತೆ ಇವರು ಮೇಲೆ ಹೋದರು. ನಂದೀಶ ಖುಶಿಯಿಂದ "ಸಂತೋಷಕ್ಕೆ.. ಹಾಡು ಸಂತೋಷಕ್ಕೆ.." ಎಂದು ಹಾಡಲಾರಂಭಿಸಿದ. ದಸರೆಗೆಂದು ವಿಶೇಷವಾಗಿ ದೀಪಗಳಿಂದ ಅಲಂಕಾರಕೊಂಡಿದ್ದ ಅರಮನೆ, ದೂರದಿಂದ ರಾತ್ರಿಯ ಕತ್ತಲಲ್ಲಿ ಅದ್ಭುತವಾಗಿ ಕಾಣಿಸುತ್ತಿತ್ತು. ಇದನ್ನು ನೋಡಿ ಶಾರದೆ ವಿಸ್ಮಿತಗೊಂಡಳು. ನಂದೀಶನೊಂದಿಗೆ ತಾನೂ ಹಾಡಲಾರಂಭಿಸಿದಳು! ಬಹುಶಃ ನಾನು ಬದುಕಿರುವಾಗಲೂ, ಶಾರದೆ ಯಾವತ್ತೂ ಅವಳು ಇಷ್ಟು ಆನಂದ ಪಟ್ಟಿರಲಿಲ್ಲವೇನೋ! ಜೊತೆಗೊಂದು ಗೆಳೆತನದ ಹಸ್ತವಿದ್ದರೆ ಬಾಳು ಎಲ್ಲೆಲ್ಲೂ ಸ್ವರ್ಗವೇ! ಹಾಡಿ ನಲಿದಾಡುತ್ತಾ, ಕನ್ನಡಕದಿಂದ ಬಣ್ಣಬಣ್ಣದ ಲೋಕವನ್ನು ನೋಡುತ್ತಾ, ಐಸ್ ಕ್ಯಾಂಡಿಯ ತಂಪನ್ನು ಸವಿಯುತ್ತಾ, ರಾತ್ರಿಯ ಚಳಿಯಲ್ಲಿ ತಣಿಯುತ್ತಾ- ಪ್ರಪಂಚವ ಮರೆತರು, ಗೆಳೆತನದ ಲೋಕದಲ್ಲಿ ತಲ್ಲೀನರಾದರು. ಪುಗ್ಸಟ್ಟೆಯಲ್ಲಿ ಸ್ವರ್ಗವ ತೋರಿಸ್ತದೆ ಈ ಗೆಳೆತನ! ಸ್ವಲ್ಪ ಹೊತ್ತಿನ ನಂತರ ಜಯಮ್ಮನೊಂದಿಗೆ ಮನೆಗೆ ಹಿಂದಿರುಗಿದರು.    


ದಸರೆಯು ಕರುನಾಡಿನ ಎಲ್ಲಾ ಜನತೆಗೂ ಪ್ರಿಯವಾದದ್ದು. ಮೈಸೂರಿನ ಈ ಉತ್ಸವದ ವಾತಾವರಣವನ್ನು, ಮಾತಿನಲ್ಲಿ ಹೇಳಲಾಗುವುದಿಲ್ಲ ಬಿಡಿ. ಅದನ್ನು ಅನುಭವಿಸಿಯೇ ಸವಿಬೇಕು! ರಾಜ್ಯದ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆಯವರು ಚಾಮುಂಡಿ ಬೆಟ್ಟದಲ್ಲಿ ತಾಯಿಗೆ ಪೂಜೆ ಸಲ್ಲಿಸಿ, ದಸರ ಉತ್ಸವಕ್ಕೆ ಚಾಲನೆ ಕೊಟ್ಟರು. ಸಹಸ್ರಾರು ಜನರು ಹೊರ ರಾಜ್ಯಗಳಿಂದ, ಹೊರ ದೇಶಗಳಿಂದ ಮೈಸೂರಿಗೆ ಬಂದಿದ್ದರು. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ಮೈಸೂರಿನ ಮನೆಮನೆಯಲ್ಲೂ ಸಂಭ್ರಮದ ವಾತಾವರಣ ತುಂಬಿತ್ತು. ಇಂತಹ ವೈವಿಧ್ಯಮಯವಾದ ಉತ್ಸವವನ್ನು ಕಾಣುವುದು ಕಣ್ಣಿಗೆ-ಮನಸ್ಸಿಗೆ ಹಬ್ಬವೋ ಹಬ್ಬ.


ನಂದೀಶ-ಶಾರದೆಯಿಬ್ಬರೂ ಜಯಮ್ಮನೊಂದಿಗೆ ಬೆಟ್ಟ ಹತ್ತಿ ಉತ್ಸವದ ಮೊದಲ ದಿನವೇ ಪೂಜೆ ಮಾಡಿಸಿಕೊಂಡು ಬಂದರು. ಬೆಟ್ಟ ಹತ್ತುತ್ತಲೇ, ಶಾರದೆ ನಂದೀಶನಿಗೆ ಮಹಿಷಾಸುರನ ಕಥೆ ಹೇಳಿದಳು. ಬೆಟ್ಟ ಹತ್ತಿದ ನಂತರ ಮಹಿಷಾಸುರನ ಬೃಹತ್ ಪ್ರತಿಮೆಯನ್ನು ಕಂಡು "ನಾನು ಆವಾಗ ಇದ್ದಿದ್ರೆ ಮಹಿಷಂಗೆ ಒಂದು ಕೈ ನೋಡ್ಕೋತಿದ್ದೆ" ಎಂದ! ಉತ್ಸವದ ಎರಡನೆಯ ದಿನ ಅರಮನೆಯ ಮೈದಾನದಲ್ಲಿನ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದರು. ಜಯಮ್ಮ ಮನೆಗೆ ಬೇಕಾದ ಸಾಮಗ್ರಿಗಳನ್ನು ಕೊಂಡಳು. ನಂದೀಶ ತನಗೆ ಮತ್ತು ತಮ್ಮ ನರಸಿಂಹನಿಗೆ ಆಟದ ಸಾಮಾನುಗಳನ್ನು ಕೊಡಿಸಿಕೊಂಡ. ನಂದೀಶ ಅರಮನೆಯ ಒಳಗೆ ಎಂದೂ ಹೋಗಿರಲಿಲ್ಲ. ಶಾರದೆಯೊಂದಿಗೆ ಉತ್ಸವದ ನಾಲ್ಕನೆಯ ದಿನದಂದು ಅರಮನೆಯನ್ನು ನೋಡಿಕೊಂಡು ಬಂದ. ಅರಮನೆಯ ವೈಭೋಗತೆಯನ್ನು ಕಂಡು ಮೂಕವಿಸ್ಮಿತನಾದ. "ನಮ್ ಇಡೀ ಊರೇ ಈ ಅರಮನೇಲಿ ಮಲ್ಕೊಬೋದು- ಕುಡಿಯಕ್ಕೆ ಚಿನ್ನದ ಲೋಟಾನ!- ಈಷ್ಟ್ ಉದ್ದ ಕನ್ನಡಿ ಬೇಕಾ ಪೌಡ್ರಾಕಳಕ್ಕೆ?- ರಾಜರ ಕಿರೀಟ ಏನ್ ವೈನಾಗೈತೆ!- ಅಕ್ಕಾ, ನಾನು ದೊಡ್ಡವನಾದ್ಮೇಲೆ ಇಂತದೇ ಒಂದು ಅರಮನೆ ಕಟ್ಟಿಸ್ತೀನಿ, ನೀನು ನಮ್ ಜೊತೆಯಲ್ಲೇ ಅರಮನೇಲ್ಲಿ ಇರುವಂತೆ.." ಎನ್ನುತ್ತಾ, ಅರಮನೆಯಲ್ಲಿ ರೌಂಡು ಹೊಡೆಯುತ್ತಾ ಮಾತನಾಡಿದ.


ಉತ್ಸವದ ಕುಸ್ತಿ ಸ್ಪರ್ಧೆ ಬಹು ಪ್ರಸಿದ್ಧ. ಇಲ್ಲಿ ಭಾಗವಹಿಸುವ ಕುಸ್ತಿಪಟಿಗಳು ದೇಶದ ವಿವಿಧ ಭಾಗಳಿಂದ ಬರುತ್ತಾರೆ. ಇವರ ಪೈಪೋಟಿಯನ್ನು ನೋಡಲು ಬಲುಮಜ ಬಿಡಿ. ಅಂದು ಮೈಸೂರಿನ ಸಂಪತ್‍ಕುಮಾರ ಮತ್ತು ಹರ್ಯಾಣದ ಗುರುಪ್ರೀತ್ ಸಿಂಗಿನ ಪಂದ್ಯವಿತ್ತು. ಮೈಸೂರಿನ ಪೈಲ್ವಾನನಿಗೆ ಇನ್ನಿಲ್ಲದ ಪ್ರೋತ್ಸಾಹವಿತ್ತು. ಪಂದ್ಯ ನೋಡಲು ಶೇಖರಪ್ಪ ನಂದೀಶ-ಶಾರದೆಯಿಬ್ಬರನ್ನೂ ಕರೆದುಕೊಂಡು ಹೋಗಿದ್ದ. ಆರಡಿ ಉದ್ದ, ಹಣೆ ಮೇಲೆ ಕುಂಕುಮ, ಅಗಲವಾದ ಮೈಕಟ್ಟು,  ಮೈಮೇಲೆ ಒಂದು ಚಡ್ಡಿ ಧರಿಸಿ, ಎದುರಾಳಿಯನ್ನು ತಿನ್ನುವಂತೆ ದುರುಗುಟ್ಟಿಕೊಂಡು ನೋಡುತ್ತಾ, ಕೈಯ್ಯಿಂದ ಮಣ್ಣಿನ ರುಚಿ ನೋಡಿ- ಇಬ್ಬರೂ ಅಖಾಡಕ್ಕೆ ಇಳಿದರು. ಪೈಲ್ವಾನರ ಮೈಕಟ್ಟನ್ನು ಕಂಡು ನಂದೀಶ "ನಮ್ಮೊರಿನ ವೀರಭದ್ರಪ್ಪ ಇವರ ಮುಂದೆ ಏನೇನೂ ಇಲ್ಲ! ಇವ್ರ ತೋಳ್ನಾಗೆ ಎಷ್ಟು ಶಕ್ತಿ ಐತೆ ನೋಡು! ಅವರ ಬೆರಳು ನನ್ನ ತೋಳಿನ ಬಲಕ್ಕಿಂದ ದಪ್ಪಗೈತೆ" ಎಂದು ಶಾರದೆಗೆ ಹೇಳುತ್ತಾ ತನ್ನ ಶಹಬ್ಬಾಸ್‍ಗಿರಿಯನ್ನು ಸೂಚಿಸಿದ. ಪಂದ್ಯವೇನೋ ರೋಮಾಂಚನಕಾರಿಯಾಗಿತ್ತು. ಆದರೂ ಬೆಂಬಲತೆಯ ಬಲವಿದ್ದ ಸಂಪತ್‍ಕುಮಾರ ಪಂದ್ಯವನ್ನು ಗೆದ್ದೇ ಬಿಟ್ಟ. ಜನರಿಗೆ ಇನ್ನಿಲ್ಲದ ಖುಶಿ!


ಯಕ್ಷಗಾನ ಬಯಲಾಟ, ಡೊಳ್ಳುಕುಣಿತ, ಕಂಸಾಳೆ, ಕೊಂಬಾಟ, ಗೊರವರ ಕುಣಿತ, ಬೊಳಕಾಟ, ಕರಡಿಮಜಲ್, ಗಾರುಡಿ ಗೊಂಬೆಯಾಟ, ವೀರಗಾಸೆ, ಹಗಲುವೇಷ, ತೊಗಲು ಗೊಂಬೆಯಾಟ, ಸುಗಮ ಸಂಗೀತ, ಚಿತ್ರ ಪ್ರದರ್ಶನ- ಇನ್ನೂ ವಿಧವಿಧವಾದ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಕೈ ಬೀಸಿ ಕರೆಯುತ್ತಿದ್ದವು. ಶಾರದೆ ನಂದೀಶರಿಬ್ಬರೂ ಬೆಳಿಗ್ಗೆ ತಿಂಡಿ ತಿಂದು ಈ ಕಾರ್ಯಕ್ರಮಗಳ ಪ್ರದರ್ಶನವನ್ನು ನೋಡಲು ಹೊರಟರು.


ಬಯಲಾಟವು ಯಕ್ಷಗಾನದ ರಂಗಸ್ಥಳ, ವೇಶಭೂಷಣ, ಹಾಡುಗಾರಿಕೆ, ಅಭಿನಯ, ನೃತ್ಯದ ಅನೇಕ ಅಂಶಗಳನ್ನೇ ಹೊಂದಿದೆ. ಇದನ್ನು ಮೊದಮೊದಲು ಊರ ಬಯಲಿನಲ್ಲಿ ರಾತ್ರಿಯಿಡೀ ಪ್ರದರ್ಶಿತ್ತಿದ್ದರಿಂದ ಇದಕ್ಕೆ ’ಬಯಲಾಟ’ವೆಂಬ ಹೆಸರು ಬಂತಂತೆ. ತುಳುನಾಡಿನ ಕೋಟಿ-ಚೆನ್ನಯರ ಕಥೆಯನ್ನು ಬಯಲಾಟದ ಮೂಲಕ ಪ್ರಸ್ತುತ ಪಡಿಸಿದರು. ಜನಪದದ ಹಿನ್ನಲೆಯನ್ನು ಹೊಂದಿದ ವೀರಗಾಸೆಯನ್ನು ಆಯುಧಗಳನ್ನು ಹಿಡಿದುಕೊಂಡು ಕೆಲ ಮಹಿಳೆಯರು ಪ್ರದರ್ಶಿಸಿದರು. ವೀರಭದ್ರನು ಶಿವನ ಮಾವನಾದ ದಕ್ಷನನ್ನು ಕೊಂದ ಬಗೆಯ ಕಥೆಯನ್ನು ಈ ಕುಣಿತದಲ್ಲಿ ವಿವರಿಸಿದರು. ಜನಪದ ನೃತ್ಯವಾದ ಗಾರುಡಿ ಬೊಂಬೆಯಾಟದಲ್ಲಿ ನೃತ್ಯಪಟುಗಳು ಗಾರುಡಿ ಬೊಂಬೆಗಳನ್ನು ಮೈಮೇಲೆ ಧರಿಸಿಕೊಂಡು ಕುಣಿದರು. ಮಹಾಭಾರತದಲ್ಲಿ ಸತ್ಯಭಾಮ ಕೃಷ್ಣನ ಮೇಲೆ ಯಾವುದೋ ವಿಷಯಕ್ಕೆ ಕೋಪ ಮಾಡಿಕೊಂಡಾಗ, ಕೃಷ್ಣನು ಆಕೆಯಾನು ಸಮಾಧಾನ ಮಾಡಲೆಂದು ಗಾರುಡಿ ಗೊಂಬೆಯನ್ನು ಧರಿಸಿ ಕುಣಿದನಂತೆ.


ಕೊಡವರ ನೃತ್ಯವಾದ ಬೊಳಕಾಟವನ್ನು ಕುಣಿಯುವವರು ಒಂದು ಕೈಯಲ್ಲಿ ಚವರಿ ಮತ್ತೊಂದು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಕುಣಿದರು. ಕೊಡವರ ಯುದ್ಧ ಸಿದ್ಧತೆಗಳಲ್ಲಿ, ಕದನದ ಶೈಲಿಯಲ್ಲಿ ಬರುವ ಕೆಲ ಅಂಶಗಳನ್ನು ಹೊಂದಿದ ಕುಣಿತವಾದ ಕೊಂಬಾಟವನ್ನೂ ಪ್ರದರ್ಶಿಸಿದರು. ಕಪ್ಪು-ಬಿಳಿಯ ಕಂಬಳಿಯ ವಸ್ತ್ರವನ್ನು ಧರಿಸಿ, ಢಮರು-ಪಿಳ್ಳಂಗೋವಿಯನ್ನು ಬಾರಿಸಿ-ನುಡಿಸುತ್ತಾ, ಪಾರಿಘಂಟೆಯನ್ನು ಹೊಡೆಯುತ್ತಾ, ಗೊರವರ ಜನಪದ ನೃತ್ಯವಾದ ಗೊರವರ ಕುಣಿತವನ್ನು ಪ್ರಸ್ತುತ ಪಡಿಸಿದರು. ಶಿವನಿಗೆ ತಮ್ಮ ನೃತ್ಯವನ್ನು ಸಮರ್ಪಿಸುತ್ತಾ, ನೆರೆದಿದ್ದ ಜನರಿಗೆ ಪ್ರಸಾದವನ್ನು ನೀಡಿದರು. ಉತ್ತರ ಕನ್ನಡದ ಜನಪ್ರಿಯ ’ಕರಾಡಿಮಜಲ್’ಅನ್ನೂ ಪ್ರಸ್ತುತ ಪಡಿಸಿದರು. ಜನಪದ ಹಾಡುಗಾರಿಕೆಯಾದ ಇದು, ತನ್ನ ಹೆಸರನ್ನು ’ಕರಾಡಿ’ಯೆಂಬ ಪಕ್ಕವಾದ್ಯದಿಂದ ಪಡೆದಿದೆ. ಜೊತೆಗೆ ಶಹನಾಯಿಯನ್ನೂ ಅದ್ಭುತವಾಗಿ ಬಳಸಿದರು. ಕಿವಿಗೆ ಇಂಪೋ ಇಂಪು! ಅತ್ತ ಆ ಕುಣಿತಗಳು ಕಣ್ಣಿಗೆ ತಂಪೋ ತಂಪು!


ಈ ಎಲ್ಲಾ ಕಾರ್ಯಕ್ರಮಗಳನ್ನು ನೋಡಿಕೊಂಡು ಮನೆಗೆ ಬಂದರು. ಮನೆಗೆ ಬರುತ್ತಿದ್ದಂತೆ, ಬಾಗಿಲ ಬಳಿ ನಿಂತಿದ್ದ ಶೇಖರಪ್ಪ "ಏನೋ ನಂದೀಶ? ಪ್ರೋಗ್ರಾಮ್ ಎಲ್ಲಾ ನೋಡ್ಕೊಂಡು ಬಂದೇನಯ್ಯಾ? ನಿಮ್ಮಪ್ಪ ಇವತ್ತು ನಮ್ಮ್ ಆಪೀಸಿಗೆ ಕರೆ ಮಾಡಿದ್ರೋ. ವಿಜಯದಶಮಿ ಮಾರನೆಯ ದಿನ ಬಂದು ನಿನ್ನ ಕರೆದುಕೊಂಡು ಹೋಗ್ತಾರಂತೆ. ನಿನ್ ತಮ್ಮ ಹುಷಾರಾದ್ನಂತೆ. ನೀನು ಹೋಗ್ತಲೇ ಅವನ್ ಜೊತೆ ಆಡ್ಬೊದೀಗ" ಎಂದು ವಿಷಯವನ್ನು ನಂದೀಶನಿಗೆ ಮುಟ್ಟಿಸಿದರು. ಕೇಳುತ್ತಲೇ ಖುಶಿಯಾದ ನಂದೀಶ ಕುಣಿಯಲಾರಂಭಿಸಿದ. "ನಮ್ಮಪ್ಪ ಬರ‍್ತಾರೆ.. ಊರ‍್ಗೆ ಕರ‍್ಕೊಂಡು ಹೋಗ್ತಾರೆ.. ತಮ್ಮ ಸಿಗ್ತಾನೆ.." ಎನ್ನುತ್ತಾ ತನ್ನ ಸಂತಸ ವ್ಯಕ್ತಪಡಿಸಿದ.


ಅಲ್ಲೇ ನಿಂತಿದ್ದ ಶಾರದೆಯ ಮನಸ್ಸು ಈ ವಿಷಯವನ್ನು ಕೇಳಿ ಒಡೆದು ಹೋಯ್ತು, ನಗೆ ಮಾಯವಾಯ್ತು. ತನ್ನೊಂದಿಗಿದ್ದ ಗೆಳೆಯ ಇನ್ನು ಬೇರೆಯಾಗುವನು ಎಂದು ತಿಳಿದು ಅವಳ ಜೀವ ಕುಸಿಯಿತು. "ಅಕ್ಕಾ.. ಕೇಳ್ದಾ.. ನರಸಿಂಹ ಹುಷಾರಾದ್ನಂತೆ! ಅಪ್ಪಾ ಬರ‍್ತಾರೆ.." ಎನ್ನುತ್ತಾ ಶಾರದೆಯ ಕೈ ಹಿಡಿದು ಹೇಳಿದ. ಶಾರದೆಯಿಂದ ಮಾತು ಹೊರಡಲಿಲ್ಲ. ಹೇಗೆ ಮಾತಾಡಿಯಾಳು!? ಆದರೂ ಈ ಬೇರ್ಪಡುಗೆ ಒಂದಲ್ಲ ಒಂದು ದಿನ ಅನಿವಾರ್ಯವೇ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂದು ತಿಳಿದುಕೊಂಡರೆ ಎಲ್ಲವೂ ಸುಗಮ. ಆದರೆ ನಮ್ಮ ಮನಸ್ಸು ಅಂತಹ ತಿಳಿವಳಿಕೆಯಿಂದ ದೂರವಿರಲು ಇಚ್ಛಿಸುತ್ತದೆ. ಕೆಲವು ಬಾರಿ ಮನಸ್ಸಿಗೆ ಸುಳ್ಳೇ ಬಲು ಹಿತ. ಹುಚ್ಚು ಮನಸ್ರೀ ಈ ಮನುಷ್ಯನದು!  


ದಸರೆಯ ಒಂಬತ್ತನೆಯ ದಿವಸವದು- ಆಯುಧ ಪೂಜೆ. ಹಿಂದಿನ ದಿನ ಜಯಮ್ಮ ಮನೆಯಲ್ಲಿನ ಆಯುಧಗಳನ್ನೆಲ್ಲ ಬೆಳಗುತ್ತಿರಲು, ನಂದೀಶ "ಅತ್ತೆ, ಅದ್ಯಾಕೆ ಚಾಕು, ಸುತ್ತಿಗೆನೆಲ್ಲಾ ಬೆಳಗೋದು? ಗಲೀಜ್ ಆಗಿರೋ ಥರ ಕಾಣಿಸ್ತಿಲ್ಲ" ಎಂದ. "ನಾಳೆ ಆಯುಧ ಪೂಜೆ ಕಣೋ. ಅವತ್ತು ಮಹಿಷಾಸುರನ ಕಥೆಯನ್ನ ಶಾರದೆ ಹೇಳಿದ್ಲು, ಜ್ಞಾಪಕ ಇದ್ಯಾ? ಚಾಮುಂಡವ್ವ ಅವನನ್ನು ಕೊಂದ ನಂತರ, ಕದನದಲ್ಲಿ ಉಪಯೋಗಿಸಲ್ಪಟ್ಟ ಆಯುಧಗಳನ್ನೆಲ್ಲಾ ಜನರು ಈ ದಿನದಂದು ಪೂಜೆ ಮಾಡಿದರಂತೆ. ಅದಕ್ಕೆ ನಾವೂ ಕೂಡ ಈ ಪದ್ದತೀನ ರೂಢಿ ಮಾಡ್ಕೊಂಡು, ನಾವು ಉಪಯೋಗಿಸುವ ಆಯುಧ-ಉಪಕರಣಗಳಿಗೆಲ್ಲಾ ಪೂಜೆ ಮಾಡ್ತೀವಿ. ನಿಮ್ ಮಾವ ಸೈಕಲ್ ತೊಳಿತಿರ‍್ಬೇಕು. ಹೋಗಿ ಅವ್ರಿಗೆ ಸಹಾಯ ಮಾಡು" ಎಂದು ಜಯಮ್ಮ ಉತ್ತರಿಸಿದಳು. ನಂದೀಶ ಅಂದು ರಾತ್ರಿ ತನ್ನ ಮಾವನೊಂದಿಗೆ ಸೈಕಲ್ ತೊಳೆದು ಮಲಗಿದ.


ಆಯುಧ ಪೂಜೆಯಂದು ಆಯುಧಗಳಿಗೆ, ಸೈಕಲ್ಲಿಗೆ ಪೂಜೆ ಮಾಡಿದರು. ಆಚಾರದಲ್ಲಿರುವಂತೆ ಸೈಕಲ್ ಚಕ್ರಕ್ಕೆ ನಿಂಬೆ ಹಣ್ಣಿಟ್ಟು ಅದರ ಮೇಲೆ ಚಕ್ರ ಬಿಡಲು ನಂದೀಶ ತಾನೇ ಮುಂದೆ ಬಂದ. ಆದರೆ ಚಕ್ರವು ಅಗಲವಲ್ಲವಾದ್ದರಿಂದ ಅವನು ಎಷ್ಟೇ ಸಾಹಸ ಮಾಡಿದರೂ ನಿಂಬೆಹಣ್ಣು ಚಕ್ರದ ಹಿಡಿತಕ್ಕೆ ಸಿಗದೇ ಅತ್ತಿತ್ತ ಹೊರಳುತ್ತಿತ್ತು. ಕೊನೆಗೆ ಶೇಖರಪ್ಪನೇ "ಬಿಡಯ್ಯಾ.. ಸಾಕು. ನನ್ ಹಾಗೆ ಮುದ್ದೆ ತಿನ್ನು ಅಂತ ಅದ್ಕೆ ಹೇಳೋದು. ಇತ್ಲ ಬಾ, ನಾನ್ ಸರ‍್ಯಾಗಿ ಚಕ್ರ ಬಿಡ್ತೀನಿ ನೋಡೀಗ.." ಎನ್ನುತ್ತಾ ನಿಂಬೆ ಹಣ್ಣನ್ನು ಸಲೀಸಾಗಿ ಅಪ್ಪಚ್ಚಿ ಮಾಡಿದರು. ಶಾರದೆಯ ಮನಸ್ಸೂ ಈ ಕ್ಷಣ ಬಹುಶಃ ಆ ಹಿಂಡಿದ ನಿಂಬೆಯಂತೆ. ರಸವಿಲ್ಲ ಅದರಲ್ಲಿ, ಸಂತಸವಿಲ್ಲ ಇವಳಲ್ಲಿ. ಇನ್ನು ಸ್ವಲ್ಪ ಸಮಯದಲ್ಲಿ ಎರಡೂ ಒಣಗಿ ನಿಲ್ಲಲಿವೆ!


ವಿಜಯದಶಮಿಗೆಂದು ಶಾರದೆ ಹೋಳಿಗೆ ಮಾಡಿದಳು. ನಾನೇ ಅವಳಿಗೆ ಹೋಳಿಗೆ ಮಾಡುವುದನ್ನು ಕಲಿಸಿಕೊಟ್ಟದ್ದು. ನಾನು ಊರಿಗೇ ಹೋಳಿಗೆ ಮಾಡಿ ಕೊಟ್ರೆ, ದೊಡ್ಡವಳಾದ ನಂತರ ನಮ್ಮ ಮನೇಲ್ಲಿ ಶಾರೆದೆಯೇ ಹೋಳಿಗೆ ಮಾಡ್ತಿದ್ದದ್ದು. ನಾನು ಮಾಡೋ ಹೋಳಿಗೆಗೆ ಊರಲ್ಲೆಲ್ಲಾ ಮೆಚ್ಚುಗೆ ಕೊಡುವವರಿದ್ದರೆ, ನಾನು ಮಾತ್ರ ನನ್ ಶಾರದೆಯ ಕೈರುಚಿಗೆ ಶರಣು! ಬಹುಶಃ ನಾನು ಉಪಯೋಗಿಸದಿರೋ ಒಂದು ಸಾಮಗ್ರಿ ಅವಳು ಹೆಚ್ಚಾಗಿ, ಮಿತಿಯಲ್ಲದೆ ಹಾಕುತ್ತಿದ್ದಳು ಅನ್ನಿಸ್ತದೆ. ಅದುವೇ ಪ್ರೀತಿ! ಪ್ರೀತಿಯಿಂದ ಯಾವ ಅಡುಗೆ ಮಾಡಿದರೂ ಅದು ನಳಪಾಕನ ಕೈರುಚಿಗಿಂತ ಒಂದು ಕೈ ಮೇಲು. ಇದು ಸತ್ಯ, ನನ್ ಮಾತ್ ಕೇಳಿ! ಆದರೆ ಹಬ್ಬದ ಹೋಳಿಗೆ ಶಾರದೆಯ ಬಾಯಿಗೆ ಮಾತ್ರ ಕಹಿಯಾಗೇ ಇತ್ತು. ಐದಾರು ವಾರ ತನ್ನ ಜೊತೆಗಿದ್ದ ಸಂಗಾತಿ, ಗೆಳೆಯ, ತಮ್ಮ, ನಗು- ಎಲ್ಲವೂ ಒಂದು ಕನಸಿನಂತೆ ಕಣ್ಮರೆಯಾಗುವ ಸಂದರ್ಭ ಒದಗಿತ್ತು. ಹೊರ ಜಗತ್ತಿಗೆ ಯಾವ ಸೂಚನೆಯನ್ನು ಕೊಡದಿದ್ದರೂ, ಒಳಗೊಳಗೆ ಅವಳು ಕಣ್ಣೀರು ಇಡ್ತೌಳೆ, ಸಂಕಟ ಪಡ್ತೌಳೆ. ಊರಿಗೆ ಊರೇ ಹಬ್ಬದ ಸಡಗರದಲ್ಲಿ ನಲಿದಾಡುತ್ತಿದ್ದರೆ ಶಾರದೆ ದುಃಖದಲ್ಲಿ ಮುಳುಗಿಹಳು. ತಾನು ಮಾರುವ ಕೆಲ ಹೂವುಗಳು ಇಂದು ದೇವರ ಕೊರಳನ್ನು ಅಲಂಕರಿಸುತ್ತಿವೆ, ಇನ್ನು ಕೆಲವು ಮನೆಬಾಗಿಲಲ್ಲಿ ಅರಳುತ್ತಾ ನಗುತ್ತಿವೆ, ಕೆಲವು ದೇವಸ್ಥಾನದ ಪವಿತ್ರ ಪೂಜ್ಯ ಪ್ರಸಾದವಾದರೆ- ಆ ಹೂವು ಕಟ್ಟಿದ ಈ ಮಲ್ಲಿಗೆ ಬಾಡೌಳೆ. ಗೆಳೆಯ ಹೊರುಡುತ್ತನೆಂದು ಚಿಂತೆಯಲ್ಲೇ ಚಿತೆ ಕಂಡೌಳೆ. ಸುಗಂಧ ಎಲ್ಲಿ ಹೋಯ್ತು ಈ ಮಲ್ಲಿಗೇಲ್ಲಿ?


ಮಾರನೆಯ ದಿನ, ಬೆಳಕಾಗ್ತಿದ್ದಂತೆ ನಂದೀಶನ ತಂದೆ ಸೀನಯ್ಯ ಆಗುಂಬೆಯಿಂದ ಬಸ್ಸು ಹಿಡಿದು ಬಂದರು. ನಂದೀಶ ನಿದ್ರೆಯಿಂದ ಎದ್ದು ಮುಖ ತೊಳೆಯಲೆಂದು ಹೊರ ಬಂದ. ಶೇಖರಪ್ಪ ಮತ್ತು ಸೀನಯ್ಯ ಮನೆಯ ಮುಂದೆ ಕುರ್ಚಿ ಹಾಕಿ ಕಾಫಿ ಕುಡಿಯುತ್ತಾ ಮಾತನಾಡುತ್ತಿದ್ದರು. ಅಪ್ಪನನ್ನು ಕಂಡವನೇ ನಂದೀಶ ಓಡಿ ಬಂದು ಸೀನಯ್ಯನನ್ನು ತಬ್ಬಿಕೊಂಡ. ಮಗನನ್ನು ನೋಡಿದ ಉತ್ಸಾಹದಲ್ಲಿ ಸೀನಯ್ಯ "ಲೇ ನಂದು.. ಬಾರೊ ಮಗನೇ.. ಮೈಸೂರಿಗೆ ಬಂದು ಗುಂಡಗಾಗಿದ್ಯಲ್ಲೋ.." ಎನ್ನುತ್ತಾ ನಂದೀಶನನ್ನು ತಬ್ಬಿಕೊಂಡು ಮುತ್ತಿಕ್ಕುತ್ತಾ, ಕೈಯ್ಯಿಂದ ದೃಷ್ಟಿ ತೆಗೆದ. ನಂದೀಶನು ಅಮ್ಮ-ತಮ್ಮ, ಅಜ್ಜ-ಅಜ್ಜಿಯ ಯೋಗಕ್ಷೇಮವನ್ನು ವಿಚಾರಿಸಿದ. "ಚೆನ್ನಾಗಿದ್ದಾರೆ. ಅಮ್ಮನಿಗೆ ನಿಂದೇ ಯೋಚನೆ. ಯಾವಾಗ್ಲು ನಿಂದೇ ನೆನಪು. ನರಸಿಂಹ ಹುಷಾರಾಗವ್ನೆ ಈಗ" ಎಂದು ಸೀನಯ್ಯ ಉತ್ತರಿಸಿದ. ನಂದೀಶನು "ಅಪ್ಪಯ್ಯ, ಊರಿಗೆ ಹೋದ ತತ್‍ಕ್ಷಣ ನಮ್ ಪಕ್ಕದ ಮನೆ ಚಿಕ್ಕಯ್ಯ ತಾತನಿಗೆ ಒಂದು ವಿಚಾರ ಹೇಳ್ಬೇಕು. ಆ ಎಂಗ್ಟ ತರೋ ಬಣ್ಣ ಹಾಕ್ಸಿ ಕೊಳ್ತಾರಲ್ಲ.., ಅದ್ರಿಂದ ಕೂದ್ಲು ಉದುರಿ ಹೋಗ್ತದಂತೆ!" ಎನ್ನುತ್ತಾ ಶಾರದೆ ಹೇಳಿದ ವಿಷಯವನ್ನು ಮುಟ್ಟಿಸಿದ. ಮಕ್ಕಳ ಬುದ್ಧಿಯೇ ಹಾಗೆ, ಅಲ್ವೇ?! ಸೀನಯ್ಯ ಇದನ್ನು ಕೇಳಿ ನಗುತ್ತಾ "ಹೌದಾ.. ಸರೀನಪ್ಪ.. ಹೇಳೋಣ" ಎಂದ. "ಮತ್ತೇ.. ದೀಪಾವಳಿಗೆ ಪಟಾಕಿ ಕೊಡ್ಸ್‍ತ್ಯಾ ತಾನೇ? ಅಲ್ಲಿ ಮೈದಾನದಲ್ಲಿ ಅಂಗಡಿ ಇಟ್ಟವ್ರೆ. ನಡೀ, ಹೋಗಿ ತರೋಣ" ಎನ್ನುತ್ತಾ ನಂದೀಶ ಮಾತಿನಲ್ಲೇ ತಯ್ಯಾರಾದ. "ಲೇ.. ಮೊದ್ಲು ಹಲ್ಲುಜ್ಜಿ, ಸ್ನಾನ ಮಾಡಿ, ನಾಷ್ಟ ತಿನ್ನು. ಆಮೇಲೆ ಹೊಗೋಣ್ವಂತೆ" ಎಂದ ಸೀನಯ್ಯ. "ಹ್ಞೂಂ.. ಎರಡೇ ನಿಂಷ, ಇಗೋ ಇನ್ನೇನ್ ಬಂದೇ ಬಿಡ್ತೀನಿ" ಎನ್ನುತ್ತಾ ತನ್ನ ಕೆಲಸ ಮುಗಿಸಲಿಕ್ಕೆ ಓಡತೊಡಗಿದ.


ಅಂದು ನಂದೀಶ ತನ್ನ ಅಪ್ಪನೊಡನೆ ಹೊರ ಹೋಗಿದ್ದರಿಂದ ಶಾರದೆ ಒಬ್ಬಳೇ, ಸಂಜೆಗೆ ಹೂವು ಮಾರಲು ಹೊರಟಳು. ದಾರಿಯುದ್ದಕ್ಕೂ ಅವನದೇ ಚಿಂತೆ. ಅವನ ಆ ಮುಗ್ಧ ಕಪಟವಿಲ್ಲದ, ಚಟಾಕಿಯ-ಚಟುವಾದ ಮಾತುಗಳಿಲ್ಲದೆ, ದಾರಿ ಮುಗಿಯುವುದೇ ಇಲ್ಲವೇನೋ ಎನ್ನುವಂತೆ ಭಾಸವಾಗುತ್ತಿತ್ತು. ಪ್ರತಿ ಕ್ಷಣವೂ ಯುಗವೆನಿಸಿತು. ತಂಗಾಳಿಯಲ್ಲೂ ಬೇಗೆಯ ತಾಪ ಕಾಣಿಸಿತು. ಹೃದಯ ಸಮುದ್ರದಲ್ಲಿನ ಸಂಕಟದ ಅಲೆ ನಿರುತ್ಸಾಹವನ್ನು ಮೂಡಿಸಿತು. ಮನಸ್ಸಿಗೆ ದುಃಖವಾದರೆ ಪ್ರತ್ಯುತ್ತರವಾಗಿ ಕಣ್ಣಿನಿಂದ ನೀರು ಬರುವು ಸಹಜ. ಆದರೆ ಕೆಲವೊಮ್ಮೆ ದುಃಖವು ಎಷ್ಟು ವಿಪರೀತವಾಗುತ್ತೆಂದರೆ ಕಣ್ಣಿಂದ ನೀರೇ ಬಾರದು. ಆ ಸ್ಥಿತಿಯಲ್ಲಿದ್ದಳು ಶಾರದೆ!


ಅಂದು ರಾತ್ರಿ ಶಾರದೆ ಮನೆಗೆ ಬಂದು ಅಡುಗೆಗೆಂದು ಈರುಳ್ಳಿ ಹೆಚ್ಚುತ್ತಾ ಕೂತಿದ್ದಳು. ನನ್ನಾಕಿ ವಿಶ್ರಮಿಸುತ್ತಿದಳು. ನಂದೀಶ ವಾಪಾಸ್ಸಾದ ನಂತರ "ಅಕ್ಕಾ.." ಎಂದು ಕೂಗುತ್ತಾ ಮನೆಯೊಳಗೆ ಬಂದ. ನಂದೀಶನನ್ನು ಕಂಡೊಡನೆ ನಿತ್ಯದಂತೆ ಶಾರದೆಯಲ್ಲಿ ಉತ್ಸಾಹ ತುಂಬಿರಲಿಲ್ಲ. "ಬಾರೋ.." ಎಂದು ಮೆಲ್ಲಗೆ ದನಿ ಮಾಡಿದಳು. ಕಣ್ಣಿನ ಕಾಂತಿಯಲ್ಲಿ ನಿಶ್ಯಕ್ತಿ ತುಂಬಿತ್ತು. ದನಿಯಲ್ಲಿ ಬೇರ್ಪಡುಗೆಯ ಬೇಸರ ಆವರಿಸಿತ್ತು. ಶಾರದೆಯ ಪ್ರತಿಕ್ರಿಯೆಯನ್ನು ಕಂಡು "ಯಾಕಕ್ಕಾ? ಹುಷಾರಿಲ್ವಾ..?" ಎಂದು ನಂದೀಶ ಕೇಳಿದ. ಅವನ ಆ ಅಕ್ಕರೆಯ ದನಿ ಇವಳ ಮನದ ವೀಣೆಯ ತಂತಿಯನ್ನು ಮೀಟಿತು. ಅದರ ಆ ಶಬ್ಧದ ಉತ್ತರವಾಗಿ, ಕೊನೆಗೂ ಅವಳ ಕಣ್ಣಿನಿಂದ ನೀರು ಇಳಿಯಿತು. ಅಳ್ತಾಳ್ರೀ ನನ್ ಮಗಳು! ನನ್ ಸಂಕಟಾನ ಹೇಗ್ ಹೇಳ್ಳೀ ನಿಮಗೆ? ಹಾದರಕ್ಕೆ ಹುಟ್ಟಿದ ವಿಧಿಯಿದು ಕಣ್ರೀ! ನಿಮಿಷಕ್ಕೊಂದು ಬಣ್ಣ, ನೆಮ್ಮದಿಯೆಲ್ಲಿ ನಮಗೆ?


ಶಾರದೆಯ ಈ ಸ್ಥಿತಿಯನ್ನು ಕಂಡು ಆಶ್ಚರ್ಯನಾದ ನಂದೀಶನು "ಅಳಬೇಡಕ್ಕಾ? ಯಾಕ್ ಅಳ್ತೀ?" ಎಂದು ಕೇಳಿದ. ಕೆಲ ಕ್ಷಣ ಸುಮ್ಮನಿದ್ದ ಶಾರದೆ "ಇಲ್ಲಪ್ಪಾ.. ಯಾಕ್ ಅಳ್ಬೇಕು ಹೇಳು? ಈರುಳ್ಳಿ ಹೆಚ್ತಾ ಇದ್ದೀನಲ್ಲಾ, ಅದ್ಕೇ ನೀರು ಬಂತು" ಎಂದು ನೆಪ ಕೊಟ್ಟಳು. "ಓಹ್! ಹೌದು, ನಂಗೂ ನೀರು ಬರ‍್ತೈತೆ. ಈ ಈರುಳ್ಳಿನೇ ಹಂಗೆ!" ಎಂದ ನಂದೀಶ. "ನಮ್ಮಪ್ಪ ಬಂದ್ರು ಕಣಕ್ಕಾ! ಇಬ್ರೂ ಹೋಗಿ ಪಟಾಕಿ ತಂದ್ವಿ. ಹಬ್ಬದ ಮೂರು ದಿನವೂ ಹೊಡಿತೀನಿ. ಎಷ್ಟೊಂದು ಥರದ ಪಟಾಕಿ ಐತೆ ಚೀಲದಲ್ಲಿ. ಗೊತ್ತಾ!? ಆಮೇಲೇ.., ನಾಳೆ ಊರಿಗೆ ಹೊಗ್ತೀವ್ನಿ. ನಾಳೆ ಬೆಳಿಗ್ಗೆ ಏಂಟಕ್ಕೆ ಬಸ್ಸಂತೆ. ಅಮ್ಮ, ನರಸಿಂಹ, ಅಜ್ಜ-ಅಜ್ಜಿ ಎಲ್ರನ್ನೂ ನೋಡ್ಬೋದು ನಾಳೆ. ನಂಗೆ ಮೀಸೆ ಬಂದೈತೆ ಅಂತ ಎಲ್ರಿಗೂ ತೋರಿಸ್ತೀನಿ.." ಎನ್ನುತ್ತಾ ತನ್ನ ಕಾಲ್ಪನಿಕ ಚಿಗುರು ಮೀಸೆಯನ್ನು ತಿರುವುತ್ತಾ ನಗಲಾರಂಭಿಸಿದ. ಮಾತು ಹೊರಡಿಸಲೂ ಆಗದ ಶಾರದೆ "ಒಳ್ಳೇದಪ್ಪ.. ಒಳ್ಳೇದು" ಎನ್ನುತ್ತ ದುಃಖದ ಉಸಿರು ಬಿಟ್ಟಳು. ಅಷ್ಟರಲ್ಲಿ, ಜಯಮ್ಮನ ಭೋಜನದ ಕೂಗು ಬಂತು. "ಸರೀ ಮತ್ತೆ.. ಅತ್ತೆ ಊಟಕ್ಕೆ ಕೂಗ್ತೌಳೆ. ನಾನು ಬರ‍್ತೀನಿ. ನಾಳೆ ಬಸ್ಸು ಹತ್ಸಕ್ಕೆ ಬರ‍್ತ್ಯಾ ತಾನೇ?" ಎಂದ. "ಆಯ್ತಪ್ಪ.. ಬರ‍್ತೀನಿ.." ಎಂದಳು ಶಾರದೆ. ಅವಳ ಉತ್ತರ ಸಿಗ್ತಿದ್ದಂತೆಯೇ ನಂದೀಶ ಜಿಂಕೆಯ ಮರಿಯಂತೆ ಉತ್ಸಾಹಾದಲ್ಲಿ ಓಡ ತೊಡಗಿದ. ಅವನು ಹೋದ ದಾರಿಯನ್ನೇ ನೋಡ್ತಾ, ಮತ್ತೇ ಕಣ್ಣೀರಿಟ್ಟಳು ಶಾರದೆ!


ಅವನದೇನು ತಪ್ಪಿಲ್ಲ ಬಿಡಿ. ಈ ವಯಸ್ಸಿನಲ್ಲಿ ಎಲ್ರೂ ಹಾಗೇ. ಕ್ಷಣಮಾತ್ರಕ್ಕೆ ವ್ಯಕ್ತಿ ಅಥವಾ ವಸ್ತುವೊಂದನ್ನು ಮನಸ್ಸಿಗೆ ಹಚ್ಚಿಕೊಂಡರೂ, ಆಸಕ್ತಿ ಹುಟ್ಟಿಸುವ-ಉತ್ಸಾಹ ಮೂಡಿಸುವ ಮತ್ತೊಂದು ವಿಷಯ ಬಂದೊಡನೆ ಮನಸ್ಸು ಬೇರೊಂದನ್ನೇ ಬಯಸುತ್ತದೆ. ಹಾಗೆಂದ ಮಾತ್ರಕ್ಕೆ ಮುಂಚೆಯ ವ್ಯಕ್ತಿ ಅಥವಾ ವಸ್ತುವಿನ ಮೇಲಿನ ಪ್ರೀತಿ ಕಡಿಮೆ ಆಯಿತು ಎಂದು ಹೇಳಲಾಗುವುದಿಲ್ಲ. ಮಕ್ಕಳ ಮನಸ್ಸು ಸ್ವಚ್ಛವಾದರೂ ಚಂಚಲವದು! ಇದು ಪ್ರಕೃತಿಯ ನಿಯಮ. ಆದರೆ ಈ ಕೊಂಚ ವಯಸ್ಸಾದ ಮನಸ್ಸು ಹಾಗಲ್ಲ ನೋಡಿ. ಮೆಚ್ಚಿದ ಗೆಳೆತನ-ಪ್ರೀತಿಯನ್ನು ಹಚ್ಚಿಕೊಂಡ ಮೇಲೆ, ಅದು ಎಂದಿಗೂ ಮನಸ್ಸಿಗೆ ಹಿತಕರ. ಎಂದಿಗೂ ಆ ಪ್ರೀತಿಯನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಹೌದ್ರೀ, ಈ ಮನಸ್ಸಿನ ಆಟ ಕೆಲವೊಮ್ಮೆ ವಿಚಿತ್ರ!


ಅಲ್ಲೇ ಮಲಗಿ ವಿಶ್ರಮಿಸುತ್ತಿದ್ದ ನನ್ನಾಕಿ "ಯಾಕೆ ಶಾರದೆ? ಯಾಕ್ ಅಳ್ತ್ಯಮ್ಮಾ? ಅವನು ಒಂದಲ್ಲಾ ಒಂದು ದಿನ ಹೋಗಲೇ ಬೇಕಿತ್ತು ತಾನೇ? ಅವನನ್ನು ಇಷ್ಟು ಸನಿಹ ತೆಗೆದುಕೊಂಡದ್ದು ತಪ್ಪಲ್ಲ. ಆದ್ರೆ ಈ ರೀತಿ ಸಂಕಟ ಪಡುವುದರಲ್ಲಿ ಏನು ಥರವಿದೆ ಹೇಳು? ನಗುನಗುತಾ ಕಳುಹಿಸಿ ಕೊಡು ಅವನನ್ನ" ಎನ್ನುತ್ತಾ ಎದ್ದು ಕೂತಳು. "ಇಲ್ಲಜ್ಜಿ.. ನಾನೆಲ್ಲಿ ಅಳ್ತಿದ್ದೆ?" ಎಂದು ಸುಳ್ಳು ಹೇಳಿದಳು ಶಾರದೆ. "ನಾನು ನಿನ್ನ ಸಾಕಿದವಳು ಕಣೇ. ಮಾತಾಡಲಿಕ್ಕೆ ಬಾಯಿಯ ಶಬ್ಧಗಳೂ ಬೇಡ, ಕಣ್ಣಿನ ನೋಟಾನೂ ಬೇಡ. ಎದೆಬಡಿತವ ಅರಿತ್ರೆ ಸಾಕು. ದುಃಖ ಪಡಬೇಡ್ವೇ ನನ್ ತಾಯಿ. ಹೇಳ್ತಾರೆ ನೋಡು ’ಸಂಬಂಧಗಳು ಗಾಳಿಪಟಗಳಂತೆ ಇರ‍್ಬಾರ‍್ದು. ಏಕೆಂದ್ರೆ, ಅವು ಎಷ್ಟೇ ಎತ್ತರದಲ್ಲಿ ಹಾರಿದ್ರೂ, ಅವನ್ನು ನಿಯಂತ್ರಣದಲ್ಲಿ ಇಡಲಿಕ್ಕೆ ಯಾವಾಗ್ಲೂ ದಾರವನ್ನು ಎಳೆಯ ಬೇಕಾಗ್ತದೆ. ಸಂಬಂಧಗಳನ್ನ ಹಕ್ಕಿಮರಿಗಳ ರೀತಿ ಕಾಣು. ಅವಕ್ಕೆ ಅಕ್ಕರೆ ತೊರಿಸು-ಪ್ರೀತಿಸು, ಸಮಯ ಬಂದಾಗ ಹಾರಲು ಬಿಡು. ಆ ಹಕ್ಕಿಗಳಿಗೆ-ಆ ಸಂಬಂಧಗಳಿಗೆ ನಿನ್ನ ಪ್ರೀತಿಯ ಅಗತ್ಯ-ನಿನ್ನ ಬೆಚ್ಚನೆಯ ಗೂಡಿನ ಆಶ್ರಯ ಬೇಕಿದ್ದರೆ, ಅವು ಖಂಡಿತವಾಗಿಯೂ ಹಿಂದಿರುಗುತ್ತವೆ’. ಕಣ್ಣೋರಿಸಿಕೊ ನನ್ನಮ್ಮ.." ಎಂದಳು. ನನ್ನಾಕಿಯ ಮಾತಿನಲ್ಲಿ ನಿಜಾಂಶವಿದ್ದರೂ, ಆಡಿದ ಮಾತಿನಷ್ಟು ಸುಲಭವಲ್ಲವದು!


ಅಂದು ರಾತ್ರಿ ಶಾರದೆ ಮಲಗಲಿಲ್ಲ. ಕಣ್ಣು ಮುಚ್ಚಿದ ಮಾತ್ರಕ್ಕೆ ನೆನಪುಗಳು ಹೇಗೆ ನಿಂತಾವು ಹೇಳಿ? ಹೇಗಾದರೂ ಬಸ್ಸು ಬಾರದೇ, ನಂದೀಶ ಇನ್ನೊ ಕೆಲವು ದಿನಗಳ ಇಲ್ಲೇ ಇರುವಂತಾಗಲಿ ಎಂದು ಮುಚ್ಚದ ಕಣ್ಣು ಹುಸಿಗನಸು ಕಂಡಿತು! ಮನ ಮೆಚ್ಚಿದ ಗೆಳೆಯನಿಗೆ ನಾಳೆ ಬೀಳ್ಗೊಡಬೇಕು ಎಂದು ಮನ ಕುಂದಿದೆ. ಮನುಷ್ಯನಿಗೆ ಬೇಕಾದದ್ದು ಅಂತಸ್ತು-ಗೌರವ-ಹಣ-ಬಂಗಲೆ-ಕಾರು ಇತ್ಯಾದಿ ಎಂದೆಲ್ಲಾ ಜನರು ಹೇಳಬಹುದು. ಇವೆಲ್ಲಾ ತಾತ್ಕಾಲಿಕ ಖುಷಿಯನ್ನಷ್ಟೇ ತರುತ್ತವೆ. ಮನಿಸ್ಸಿಗೆ ಶಾಶ್ವತ ನಗುವನ್ನು ತರುವ ಶಕ್ತಿ ಕೇವಲ ಪ್ರೀತಿ ಹೊಂದಿದೆ. ಇದು ಅಕ್ಷರಶಃ ನಿಜ. ಸಾಕ್ಷಿ ಇಲ್ಲೇ ಇದೆ, ನೋಡಿ ಸ್ವಾಮಿ!


ಬೆಳಿಗ್ಗೆ ಎದ್ದೊಡನೆ ಶಾರದೆ ಹೂವು ತಂದು, ಅದನ್ನು ಕಟ್ಟಿ, ಮನೆಗಳಿಗೆ ಕೊಡಲೆಂದು ಹೊರಟಳು. ಬೆಳಿಗ್ಗೆ ಬೇಗ ತಿಂಡಿ ಮುಗಿಸಿ, ಇತ್ತ ನಂದೀಶ ತನ್ನ ತಂದೆಯೊಡನೆ ಬಸ್ಸು ನಿಲ್ದಾಣದೆಡೆ ಹೊರಟ. ತನ್ನ ಅತ್ತೆಗೆ, ನನ್ನಾಕಿಗೆ, ಗಿಡಕ್ಕೆ ನೀರು ಹಾಕ್ತಿದ್ದ ಗೌರಿಗೆ- ಎಲ್ಲರಿಗೂ ಟಾಟಾ ಮಾಡಿ ಹೊರಟ. ಶೇಖರಪ್ಪ ಅವರಿಬ್ಬರನ್ನು ನಿಲ್ದಾಣದ ತನಕ ಬಿಟ್ಟುಬರಲು ಹೊರಟರು. ನಂದೀಶನನ್ನು ಕೊನೆಯ ಬಾರಿ ಕಾಣಲೆಂದು ಶಾರದೆ ಬೇಗಬೇಗ ನಡೆದಳು. ಕೆಲಸವನ್ನು ಬಿರ್ರನೆ ಮುಗಿಸಿ ನಂದೀಶನನ್ನು ಬೀಳ್ಗೊಡಲೆಂದು ಒಂದೇ ಉಸಿರಿನಲ್ಲಿ ಹೊರಟಳು. ಎಲ್ಲರ ಮನೆಗೂ ಹೂವು ತಲುಪಿಸಿ ನಿಲ್ದಾಣಕ್ಕೆ ಏಳುಮುಕ್ಕಾಲಿನ ಸುಮಾರಿಗೆ ಬಂದಳು. ಗೆಳೆಯನ ಕೊನೆಯ ದರುಶನವ ಕಾದು ಕೂತಳು. ನಂದೀಶನನ್ನು ಅಳುತ್ತಾ ಕಳುಹಿಸಬಾರದೆಂದು ತನ್ನ ಕಣ್ಣೀರನ್ನು ತಡೆದು ಕೂತಿಹಳು. ಅವನು ಬಾರುವ ದಾರಿಯನ್ನೇ ಕಾಯುತ್ತಾ, ಮನಸ್ಸಿನ ವಿಪರೀತ ಉದ್ವೇಗವನ್ನು ಸಮರಿಸುತ್ತಿಹಳು. ದಾರಿಯಲ್ಲಿ ಯಾವ ಹುಡುಗನನ್ನು ಕಂಡರೂ ನಂದೀಶನೇ ಎಂಬಂತೆ ಪ್ರತಿಕ್ರಯಿಸುತ್ತಾ, ಪದೆಪದೆ ನಿರಾಶಳಾಗಿ ಕಾದಿಹಳು. ಅವನನ್ನು ಕೊನೆಯೊಮ್ಮೆ ಕಂಡು, ಮುತ್ತೊಂದನ್ನು ನೀಡಿ ಕಳುಹಿಸಿಕೊಡುವ ತನಕ ಮನಿಸ್ಸಿಗೆ ಕಿಂಚಿತ್ತೂ ಸಮಾಧಾನವಿಲ್ಲ. ಕೂತಲ್ಲಿ ಕೂರಲಾರದೆ, ನಿಂತಲ್ಲಿ ನಿಲ್ಲಲಾರದೆ ಎದುರುನೋಡೌಳೆ ಗೆಳೆಯ ಬರುವ ಹಾದಿಯನ್ನ. ವಿಧಿ ಕೊನೆಗೂ ಸ್ಪಂದಿಸುವುದೇ?


ಒಂದು ಗಂಟೆಯ ಕಾಲ ಕಾದ ನಂತರ, ಈ ತಳಮಳವನ್ನು ತಾಳಲಾರದೆ, ಅಲ್ಲಿಯ ಕಾಫಿ ಅಂಗಡಿಯವನನ್ನು ವಿಚಾರಿಸಿದಳು. "ಸ್ವಾಮಿ, ಆಗುಂಬೆಗೆ ಹೋಗುವ ಬಸ್ಸು ಇಲ್ಲೇ ತಾನೆ ಬರೋದು?" ಎಂದು ಪ್ರಶ್ನಿಸಿದಳು. ಒಲೆಯ ಮೇಲಿನ ಹಾಲಿಗೆ ಕಾಫಿ ಪುಡಿಯನ್ನು ಹಾಕುತ್ತಿದ್ದ ಅಂಗಡಿಯವ "ಹೌದ್ರೀ, ಇಲ್ಲೇ ಬರೋದು. ಯಾಕೆ?" ಎಂದು ಉತ್ತರಿಸಿದ. "ಬೆಳಿಗ್ಗೆ ಎಂಟಕ್ಕೆ ಬಸ್ಸು ಇತ್ತಲ್ವ. ಯಾಕಿನ್ನೂ ಬಂದಿಲ್ಲ? ಇವತ್ತು ಬರಲ್ವೇ?" ಎನ್ನುತ್ತಾ, ಬಹುಶಃ ಇಂದು ಬಸ್ಸು ಬರುವುದಿಲ್ಲವೇನೋ ಎಂದು ಭಾವಿಸಿ, ಕೊಂಚ ಉತ್ಸಾಹಗೊಳ್ತಾ- ನಂದೀಶನೊಂದಿಗೆ ಇನ್ನೊಂದು ದಿನ ಇರಬಹುದೆಂದು ಎಣಿಸ್ತಾ, ಅಂಗಡಿಯವನನ್ನು ಕೇಳಿದಳು. "ಏನು? ಎಂಟಕ್ಕಾ? ದಿನಕ್ಕೆ ಒಂದೇ ಬಸ್ಸು ಇರೋದ್ರೀ. ಆದ್ರೆ ಎಂಟಕ್ಕಲ್ಲ, ಏಳುವರಗೆ. ಅದೇನೋಪ್ಪಾ, ಇವತ್ತು ಸಮಯಕ್ಕೆ ಸರಿಯಾಗಿ ಬಂದೇ ಬಿಡ್ತು, ಅಮವಾಸೆ-ಹುಣ್ಣಿಮೆಯಂತೆ. ಬೇಕಂದ್ರೆ ನಾಳೆ ಅದೇ ಟೈಮಿಗೆ ಬನ್ನಿ, ಟಿಕೆಟ್ಟು ಸಿಗ್ತದೆ" ಎಂದ. ಶಾರದೆಯ ಮನಸ್ಸು ಛಿದ್ರವಾಯ್ತು, ಎದೆಯಲ್ಲಿ ಜ್ವಾಲಾಮುಖಿಯೇ ಎದ್ದಿತು! ಹೇಳಿದ್ನಲ್ಲಾ, ಹಾದರಕ್ಕೆ ಹುಟ್ಟಿದ ವಿಧಿಯಿದು!            






ಮೂರು ವಾರಗಳ ತರುವಾಯ..


ನಂದೀಶನು ಆಗುಂಬೆಗೆ ಹೊರಟ ನಂತರ ಶಾರದೆಯ ಜೀವನ ಪುನಃ ಹಿಂದಿನ ಸ್ಥಿತಿಗೇ ಮರಳಿತು. ಜೀವ ಬೇಡುವ ಪ್ರೀತಿಯ ಮಾತುಗಳು ಅಪರೂಪವಾದವು. ಶಾಮಪ್ಪ ಇನ್ನೂ ಕೋರ್ಟು-ಕಛೇರಿಯೆಂದು ಆಸ್ತಿಯ ಪಾಲಿಗಾಗಿ ಅಲೆದಾಡುತ್ತಿದ್ದಾನೆ. ಶಾರದೆಗೆ ಸಮಾಧಾನ ಮಾಡ್ತಾ ನನ್ನಾಕಿ ಕಾಲ ಹಾಕ್ತಿದ್ದಾಳೆ. ಕಳೆದ ತಿಂಗಳು ಶಾರದೆ ಕೂಡಿಟ್ಟಿದ್ದ ಹಣದಿಂದ ನನ್ನಾಕಿಯೇ ಯಶೋದಮ್ಮನಿಗೆ ಪರಿಚಯವಿದ್ದ ಅಂಗಡಿಯೊಂದರಿಂದ ಶಾರದೆಗೆ ಹೊಸ ಲಂಗ-ದಾವಣಿಯನ್ನು ತೆಗೆದಳು. ಅವಳಿಗೆ ಕಣ್ಣು ಕಾಣದಿದ್ದರೂ, ಶಾರದೆಗೆ ಬಟ್ಟೆ ಕೊಂಡಾಗಲೆಲ್ಲಾ ಅವಳೇ ಆಯ್ಕೆ ಮಾಡ್ತಿದ್ದದ್ದು. ತನ್ನ ಮೊಮ್ಮಗಳಿಗೆ ಇಂತದೇ ಬಣ್ಣ ಹೊಂದುತ್ತದೆ, ಇಂತದೇ ವಿನ್ಯಾಸ ಚೆನ್ನಾಗಿ ಕಾಣ್ತದೆ ಎನ್ನುತ್ತಿದ್ದಳು. ಈ ಅನುಬಂಧಗಳೇ ಹಾಗೆ!  


ಇಂದು ದೀಪಾವಳಿಯ ರಾತ್ರಿ. ವಠಾರದವರು, ನೆರೆಹೊರೆಯವರೆಲ್ಲಾ ಮನೆಗಳಲ್ಲಿ ದೀಪ ಹಚ್ಚಿ, ಬೆಳಕಿನ ಹಬ್ಬವನ್ನು ಸಡಗರದಿಂದ ಬರಮಾಡಿಕೊಂಡಿದ್ದಾರೆ. ಇಡೀ ಮೈಸೂರೇ ಮನೆಮನೆಯ ದೀಪಗಳ ಬೆಳಕಿನಿಂದ ಪ್ರಜ್ವಲಿಸುತ್ತಿದೆ. ನಮ್ಮನೆಯಲ್ಲೂ ದೀಪ ಬೆಳಗೈತ್ರೀ. ಎಲ್ಲೆಡೆಯ ಪಟಾಕಿಯ ಸಂಭ್ರಮದ ಸದ್ದು ನಮ್ಮನೆಯಲ್ಲೂ ಕೇಳಿಸ್ತದ್ರೀ. ಆದ್ರೆ ಶಾರದೆಯ ಕಣ್ಣ ಕಾಂತಿಯ ಬೆಳಕು ಕ್ಷೀಣಿಸೈತೆ. ಮನದ ಜಿಗುಪ್ಸೆ ಕಿವಿಯಲ್ಲಿ ಬೇಸರದ ಪದವ ಹಾಡೈತೆ. ನೆಲದ ಮೇಲೆ ಕೂತು, ಬೆನ್ನನ್ನು ಗೋಡೆಗೆ ಒರಗಿಸೌಳೆ. ನನ್ನ ಫೋಟೋವಿನೆಡೆ ನೋಡಿ, ತನ್ನ ಕಣ್ಣಿಂದ ಅವಳ ಮನದ ಹೆಬ್ಬಯಕೆಯನ್ನು ನನಗೆ ಪುನಃ ತಿಳಿಸೌಳೆ. ಹೊಸ ಲಂಗ ದಾವಣಿಯೇನೋ ಹಾಕಿದ್ದಾಳೆ. ಆದ್ರೆ ಅದರ ಕಾಸಿಗಾಗಿ ಬುಟ್ಟಿಯಲ್ಲಿ ಹೂವು ಮಾರಿದವ ಜೊತೆಗಿಲ್ಲ, ಅವನ ಅಕ್ಕರೆಯ ಮಾತಿನ ಹಿತವಿಲ್ಲ. ಇವಳು ಆಸೆ ಪಟ್ಟ ಹೊಸ ಲಂಗವ ಕೊಳ್ಳಲೆಂದು ನಗುನಗುತಾ ಸಹಾಯ ಮಾಡಿದ. ಈಗ ಇವಳು ಅದೇ ಕಾಸಿನಿಂದ ಹೊಸ ಬಟ್ಟೆ ಧರಿಸೌಳೆ. ಆದ್ರೆ, ಅದನ್ನ ನೋಡಲು ಅವನೂ ಇಲ್ಲ, ಆಸೆಯಂತೆ ಹೊಸ ಬಟ್ಟೆ ಕೊಂಡ ಸಂತಸ ಇವಳಿಗೂ ಇಲ್ಲ. ವಿಚಿತ್ರ ವಿಧಿ, ಹುಚ್ಚು ಮನಸ್ಸು!


ಆ ಶಬರಿ ಭಗವಂತ ರಾಮನ ದರುಶನವನ್ನು ಕಾಯ್ತಾ ಕೂತಳು. ಪ್ರೀತಿ ಕೂಡ ದೈವವೇ! ಪ್ರೀತಿ ಭವಂತನ ಮತ್ತೊಂದು ರೂಪವಷ್ಟೇ. ಮನಸ್ಸಿಗೆ ಶಾಶ್ವತವಾದ ಸಂತಸವ ಕೇವಲ ಪ್ರೀತಿ ತರಲು ಸಾಧ್ಯ. ಶಾರದೆಯೂ ಆ ಶಬರಿಯಂತೆ ಕಾಯುತ್ತಾ ಕೂತೌಳೆ. ಇವರಿಬ್ಬರ ಮನಸ್ಸೂ ಪಾವನವಾದದ್ದು. ಇಬ್ಬರೂ ಕಪಟವನ್ನರಿಯದವರು. ಇಬ್ಬರೂ ಶುದ್ಧ-ಶುಭ್ರ ಆಲೋಚನೆಯವರು. ಆ ಶಬರಿ ರಾಮನು ಬಂದೇ ಬರುವನು, ಅವನಿಗಾಗಿ ಕಾಯುವೆನೆಂದು ತಾಳ್ಮೆ ತೋರಿದ ಮಹಾಭಕ್ತೆ. ಈ ಶಬರಿ ಕಾದೌಳೆ ಪ್ರೀತಿಯ. ಆದರೆ ಆ ಪ್ರೀತಿ ಸಿಗುವುದೋ ಇಲ್ಲವೋ ಎಂದು ತಿಳಿಯಳು. ಆದರೂ ಕಾದಿಹಳು. ಜೀವನದಲ್ಲಿ ಪ್ರೀತಿಯ ಎದುರುನೋಡಿಹಳು. ಇವಳೂ ಶಬರಿ!


ಹೌದು, ಈ ಅಸಹಾಯಕ ಮುದುಕ ಇಷ್ಟೆಲ್ಲಾ ಕಥೆಯೇನೋ ಹೇಳಿದ. ಏನ್ ಅರ್ಥ ಮಾಡ್ಕೊಂಡ್ರ? ನನ್ನ ಮೊಮ್ಮಗಳು ಅದೃಷ್ಟದಿಂದ ವಂಚಿತಳಾದವಳು ಅಂತೀರಾ? ಕಥೇನ ಪಕ್ಕಕ್ಕಿಡಿ. ಶಾರದೆ ಪಡುವ ಸಂಕಟಕ್ಕೆ ಈ ಮುದುಕ ನೋವು ಪಡುವುದೇ ಸಾಕು. ನೀವೂ ಸಹ ಎದೆಗುಂದಬೇಡಿ. ನಿಮ್ಮ ಜೀವನವನ್ನೂ ಒಮ್ಮೆ ಸಮೀಕ್ಷಿಸಿ, ನಿಮ್ಮನ್ನು ನೀವೇ ಸಂದರ್ಶಿಸಿ! ಆಗ ನಿಮಗೇ ಅರ್ಥವಾಗ್ತದೆ- ಶಾರದೆಯ ಮನದ ಭಾವನೆ ನಿಮ್ಮಲ್ಲೂ ಉಂಟೆಂದು. ನೀವು ಜೀವನದಲ್ಲಿ ನಾನಾ ಆಸೆಗಳನ್ನು ಅರಸುತ್ತ ಅಲೆದಾಡುತ್ತೀರ. ಆ ಆಸೆಯು ಪೂರೈಸಿದ ನಂತರ ಮತ್ತೊಂದು ಆಸೆಯನ್ನು ಕಾಣುವಿರಿ. ಹಿಂದಿನ ಆಸೆಯ ಲೆಕ್ಕವಿಲ್ಲ ನಿಮಗೆ, ಹೊಸ ಆಸೆ ಕನಸೇ ಎಲ್ಲ. ಈ ಆಸೆಗಳು ಅಧಿಕಾರವಾಗಿರಬಹುದು, ಧನವಾಗಿರಬಹುದು, ತಪ್ಪು ಉದ್ದೇಶಗಳನ್ನು ಹೊಂದಿದ ಸಂಬಂಧಗಳಾಗಿರಬಹುದು, ಮತ್ತೊಂದಾಗಿರಬಹುದು. ಹಾಗಿದ್ದರೆ ಜೀವನ ಕೇವಲ ಆಸೆಗಳನ್ನು ಪೂರ್ಣಗೊಳಿಸಿಕೊಳ್ಳುವ ಒಂದು ಅರ್ಥವಿಲ್ಲದ ಪಯಣವೇ? ಹಾಗಿದ್ದರೆ, ನಿಮ್ಮ ಬಗ್ಗೆ ನಿಮಗೆ ಗೌರವ ಉಂಟೇ?


ಈ ಎಲ್ಲಾ ಆಸೆಗಳನ್ನು ಮೀರಿರುವುದು, ನಿರರ್ಥಕ ಬಯಕೆಗಳಿಗಿಂತ ಎತ್ತರವಾದದ್ದು ಪ್ರೀತಿ. ಪ್ರೀತಿ ಕೊಡಲು-ತೆಗೆದುಕೊಳ್ಳಲು ಚೌಕಾಶಿ ಮಾಡ್ಬೇಡಿ. ಆಗ ನಿಮಗೂ ಹಿತ, ನಿಮ್ಮ ಸುತ್ತಲಿನವರಿಗೂ ಹಿತ. ಜೀವನವನ್ನು  ಜಟಿಲಗೊಳಿಸಬೇಡಿ. ಎಲ್ಲರಿಗೂ ನಿಜವಾಗಲೂ ಬೇಕಾದದ್ದು, ಎರಡಕ್ಷರದ ’ಪ್ರೀತಿ’!

7 comments:

  1. ಕಥೆ ಚೆನ್ನಾಗಿದೆ.

    ReplyDelete
  2. Thumbha chennagidhe....manashu hagura ayathu...
    Thanks poorna

    vinoo

    ReplyDelete
  3. manashu hage thubha badlaghutha iruuthadhe.

    katha oodidamele mansu hagura aaythu

    vinoo

    ReplyDelete
  4. Bahala chennagide, tumbha varshagala nathara ondu kathe odide

    ReplyDelete
  5. dhanyavaadagalu.. nimma anisikeya protsahavu nanage innashtu balavannu needide..
    oduva havyaasaviruva nimma bandhu-mitrarigoo odalu heli..

    ReplyDelete
  6. Thumba chennagi bardidiya.

    ReplyDelete