ಬೆಳವಣಿಗೆ
ಪುರಂದರದಾಸರ ತಂದೆಯ ಹೆಸರು ವರದಪ್ಪ ನಾಯಕ, ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇದರಿಂದಲೇ ಅವರು ಮಗನಿಗೆ ಶ್ರೀನಿವಾಸ ಎಂದು ಹೆಸರಿಟ್ಟರಂತೆ. ಶ್ರೀನಿವಾಸ ನಾಯಕ ಬೆಳೆದ ನಂತರ ತಂದೆಯ ವೃತ್ತಿಯನ್ನೇ ಮುಂದುವರಿಸಿದ. ಆದರೆ ಅತ್ಯಂತ ಜಿಪುಣನೆಂದು ಹೆಸರಾದ ಶ್ರೀನಿವಾಸ ತಂದೆ ಅಸ್ವಸ್ಥರಾದಾಗಲೂ ಹಣ ಖರ್ಚು ಮಾಡಲು ತಡೆದನಂತೆ. ಶ್ರೀನಿವಾಸನ ಪತ್ನಿ ಲಕ್ಷ್ಮಿ ದಾನಶೀಲೆಯಾಗಿ ಪತಿಯ ಕೋಪ ಅವಳ ಮೇಲೆ ಬೀಳುತ್ತಿತ್ತು ಎಂದು ಹೇಳುತ್ತಾರೆ. ಅವರ ಸಂಸಾರ ಮೂಲತಃ ಪಂಡರಾಪುರದಲ್ಲಿದ್ದರೂ ಶ್ರೀನಿವಾಸ ನಂತರದ ವರ್ಷಗಳಲ್ಲಿ ಹಂಪೆಯಲ್ಲಿದ್ದನೆಂದು ತೋರುತ್ತದೆ.
ಮಾರ್ಪಾಟು
ನಂಬಿಕೆಯಂತೆ, ವಿಠ್ಠಲ (ವಿಷ್ಣು) ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ಮಗನ ಉಪನಯನಕ್ಕೆ ಹಣ ಬೇಡಿದನಂತೆ. ಜಿಪುಣ ಶ್ರೀನಿವಾಸ ಪ್ರತಿದಿನವೂ ಮಾರನೆಯ ದಿನ ಬರಹೇಳುತ್ತ, ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ವಿಠ್ಠಲ ಈಗ ಶ್ರೀನಿವಾಸನ ಮನೆಗೆ ತೆರಳಿ ಆರು ತಿಂಗಳುಗಳ ಕಾಲ ಒಬ್ಬ ವರ್ತಕ ತನ್ನನ್ನು ಸತಾಯಿಸಿ ಕೊನೆಗೆ ಸವಕಲು ನಾಣ್ಯ ಕೊಟ್ಟ ಕಥೆ ಹೇಳಿದನಂತೆ. ಲಕ್ಷ್ಮಿ ಮರುಕದಿಂದ ಅವನಿಗೆ ತನ್ನ ಮೂಗುತಿಯನ್ನು ತೆಗೆದು ಕೊಟ್ಟಳಂತೆ. ಬ್ರಾಹ್ಮಣ ತಕ್ಷಣ ಮೂಗುತಿಯನ್ನು ಶ್ರೀನಿವಾಸನ ಅಂಗಡಿಗೆ ಒಯ್ದು ಅದನ್ನು ಅಡವಿಡಲು ಪ್ರಯತ್ನಿಸಿದನಂತೆ. ಶ್ರೀನಿವಾಸ ಆ ಮೂಗುತಿಯನ್ನು ಗುರುತಿಸಿ, ಅದನ್ನು ಡಬ್ಬಿಯಲ್ಲಿಟ್ಟು ತಕ್ಷಣ ಮನೆಗೆ ಬಂದು ಪತ್ನಿಯ ಬಳಿ ಮೂಗುತಿಯನ್ನು ತೋರಿಸಲು ಹೇಳಿದನಂತೆ. ಹೆದರಿದ ಹೆಂಡತಿ ಕೊಠಡಿಯಲ್ಲಿ ವಿಷ ಕುಡಿಯುವ ಪ್ರಯತ್ನ ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅಂಗಡಿಗೆ ಹಿಂದಿರುಗಿ ಬಂದ ಶ್ರೀನಿವಾಸ ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಮಾಯವಾಗಿತ್ತಂತೆ. ತನ್ನ ಬಗ್ಗೆ ತಾನೇ ನಾಚಿಕೆಪಟ್ಟುಕೊಂಡ ಶ್ರೀನಿವಾಸ ತನ್ನ ಶ್ರೀಮಂತಿಕೆಯನ್ನು ತೊರೆದು ಹರಿದಾಸನಾಗುವ ನಿರ್ಧಾರ ತೆಗೆದುಕೊಂಡನಂತೆ. ದೇವರ ದಾರಿ ತೋರಿಸಿದ್ದರ ಬಗ್ಗೆ ಕೃತಜ್ಞತೆಗಾಗಿ ತಮ್ಮ ಹೆಂಡತಿಯ ಜ್ಞಾಪಕಾರ್ಥ ಒಂದು ಕೀರ್ತನೆಯನ್ನೂ ಪುರಂದರದಾಸರು ರಚಿಸಿದ್ದಾರೆ. ಶ್ರೀನಿವಾಸ ನಾಯಕ ಪುರಂದರ ದಾಸ ಎಂಬ ಹೆಸರನ್ನು ಪಡೆದ.
ಕವಿ ಮತ್ತು ಸಂಗೀತಗಾರ
ಪುರಂದರದಾಸರ ಪದಗಳು ಪ್ರಾಸ ಮತ್ತು ಅರ್ಥದಲ್ಲಿ ಶ್ರೀಮಂತವಾಗಿವೆ. ಉದಾಹರಣೆಗೆ:
"ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪಾದಚಾರಿ ಆಗೋದು ಹರಿ ಚಿತ್ತವಯ್ಯ"
ಪಾದಚಾರಿ ಆಗೋದು ಹರಿ ಚಿತ್ತವಯ್ಯ"
ಪುರಂದರದಾಸರ ಪದಗಳು ಮುಂದೆ ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾದವು. ಶಾಸ್ತ್ರೀಯ ಸಂಗೀತವನ್ನು ಶ್ರೀ ಸಾಮಾನ್ಯನಿಗೆ ಪರಿಚಯ ಮಾಡಿಕೊಡಲು ಯತ್ನಿಸಿದ ಪುರಂದರದಾಸರು ಮಾಯಾಮಾಳವಗೌಳ ರಾಗದಿಂದ ಹಿಡಿದು ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿಕೊಡುವ ದಾರಿಯ ಬಗೆಗೆ ಯೋಚಿಸಿದರು. ಈಗಲೂ ದಕ್ಷಿಣಭಾರತದ ಶಾಸ್ತ್ರೀಯ ಸಂಗೀತದ ಪಾಠಗಳು ಪುರಂದರದಾಸರ ಸರಳೆ, ಜಂಟಿ ವರಸೆಗಳೊಂದಿಗೇ ಆರಂಭಿಸಲ್ಪಡುತ್ತವೆ. ಪುರಂದರದಾಸರ 'ಪಿಳ್ಳಾರಿ ಗೀತೆಗಳು'(ಉದಾ: ಲಂಬೋದರ ಲಕುಮಿಕರ...., ಕೆರೆಯ ನೀರನು ಕೆರೆಗೆ ಚೆಲ್ಲಿ..... ಇತ್ಯಾದಿ) ಸಂಗೀತದ ಸ್ವರ-ಸಾಹಿತ್ಯ-ತಾಳಗಳ ಸಂಯೋಜನೆಯನ್ನು ಅಭ್ಯಸಿಸಲು ಮೊದಲ ಮೆಟ್ಟಿಲು. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ತ್ಯಾಗರಾಜರು ತಮ್ಮ "ಪ್ರಹ್ಲಾದ ಭಕ್ತಿ ವಿಜಯಮ್" ಎಂಬ ಲೇಖನದಲ್ಲಿ ಶ್ರೀ ಪುರಂದರದಾಸರನ್ನು ತಮ್ಮ ಸಂಗೀತ ಗುರುಗಳೆಂದು ಹೇಳಿಕೊಂಡಿದ್ದಾರೆ. ಹರಿನಾಮಸ್ಮರಣೆಯ ರೂಪದಲ್ಲಿ ರಚಿಸಿದ ಅವರ ಕೃತಿಗಳು ದೇವರನಾಮಗಳಾಗಿ ಪ್ರಸಿದ್ಧವಾಗಿವೆ. ಅವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನವನ್ನು ಪಡೆದ ದಾಸ ಸಾಹಿತ್ಯವನ್ನು ಶ್ರೀಮಂತವಾಗಿಸಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರ ಸಾಧನೆಯನ್ನು ಕಂಡ ಸರ್ವರೂ 'ದಾಸರೆಂದರೆ ಪುರಂದರದಾಸರಯ್ಯಾ..!' ಎಂದು ಕೊಂಡಾಡಿದ್ದಾರೆ.
ಶ್ರೀ ಪುರಂದರದಾಸರ ಜೀವನದ ಬಗ್ಗೆ ತಿಳಿಯಲು ಡಾ|| ರಾಜ್‍ಕುಮಾರ್ ಅಭಿನಯದ ’ನವಕೋಟಿ ನಾರಾಯಣ’ ಚಿತ್ರವನ್ನು ನೋಡಿ.
No comments:
Post a Comment