ಯಾವುದೇ ಭಾಷೆ ಏಳಿಗೆಯಾಗಬೇಕೆಂದರೆ ಅದಕ್ಕೆ ಸಾಹಿತ್ಯ ಅತ್ಯಮೂಲ್ಯ. ಸಾಹಿತಿಗಳು ಸಿರಿವಂತರು! - ಬರವಣಿಗೆಯ ಸಿರಿ, ಭಾಷಾ ವೈಪುಣ್ಯತೆಯ ಸಿರಿ, ಸರಸ್ವತಿಯ ಆಶೀರ್ವಾದದ ಸಿರಿ ಇವರ ಬಳಿ ಯಥೇಚ್ಛವಾಗಿ ಉಂಟು. ಇಂತಹ ಮಹಾನ್ ವಿಚಾರಕರ್ತರ, ಆದರ್ಶವಾದಿಗಳ, ಸಾಧಕರ ಬಗ್ಗೆ ತಿಳಿದುಕೊಳ್ಳಬೇಕಾದದ್ದು ನಮ್ಮ ಕರ್ತವ್ಯ. ಕನ್ನಡದ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರುವ ಅನೇಕ ಕವಿ ಮಹಾಶಯರಿದ್ದಾರೆ. ಅವರ ಬೆಗೆಗಿನ ತಿಳಿವಳಿಕೆ ನಮ್ಮಲ್ಲಿ ಸ್ವಲ್ಪ ಕಡಿಮೆಯಿರಬಹುದು. ಹಾಗಾಗಿಯೇ, ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಪ್ರತಿ ತಿಂಗಳೂ ನಾನೊಂದು ಕನ್ನಡದ ಕವಿರತ್ನಗಳ ವಿಚಾರವಾಗಿ ಬರೆಯುತ್ತೇನೆ. ಸಮಯವಿದ್ದಾಗ ತಪ್ಪದೇ ಓದಿ!
ಈ ತಿಂಗಳ ’ಕವಿ ಮಹಾಶಯ’ ಕುಮಾರವ್ಯಾಸರು.
(ಮೂಲ: ಕನ್ನಡ ವಿಕಿಪೀಡಿಯಾ)
ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. "ಗದುಗಿನ ನಾರಣಪ್ಪ" ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ.
ಕುಮಾರವ್ಯಾಸ ಜೀವಿಸಿದ್ದ ಕಾಲ ನಿರ್ದಿಷ್ಟವಾಗಿ ತಿಳಿದುಬಂದಿಲ್ಲ. 12ನೇ ಶತಮಾನದಿಂದ 16ನೇ ಶತಮಾನದ ಮಧ್ಯದಲ್ಲಿ ಕುಮಾರವ್ಯಾಸ ಜೀವಿಸಿದ್ದನೆಂದು ಬೇರೆ ಬೇರೆ ಚರಿತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗಿನ ಅಭಿಪ್ರಾಯಗಳು ಈತನ ಕಾಲ ಸುಮಾರು ಕ್ರಿ.ಶ. 1430 ಎಂದು ನಿಗದಿಪಡಿಸಿವೆ. ಕನಕದಾಸರು ಕುಮಾರವ್ಯಾಸನ ಉಲ್ಲೇಖ ಮಾಡಿರುವುದರಿಂದ ಹಾಗೂ ತಿಮ್ಮಣ್ಣ ಕವಿ ಕುಮಾರವ್ಯಾಸಭಾರತದಲ್ಲಿ ಇಲ್ಲದಿರುವ ಎಂಟು ಪರ್ವಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ಅಂದಾಜನ್ನು ಮಾಡಲಾಗಿದೆ. ಕುಮಾರವ್ಯಾಸನ ಹುಟ್ಟೂರು ಈಗ ಗದಗ ಜಿಲ್ಲೆಯಲ್ಲಿರುವ ಕೋಳಿವಾಡ ಗ್ರಾಮ;ಕಾವ್ಯರಚನೆಯನ್ನು ಮಾಡಿದ್ದು ಗದುಗಿನ ವೀರನಾರಾಯಣ ಗುಡಿಯಲ್ಲಿ. ಈಗಲೂ ಸಹ ಆ ಗುಡಿಯಲ್ಲಿ ಕುಮಾರವ್ಯಾಸನ ಕಂಬ ಎಂಬ ಒಂದು ಕಂಬವಿದೆ - ಕುಮಾರವ್ಯಾಸ ಈ ಕಂಬದ ಅಡಿಯಲ್ಲೇ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ.
ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಅನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಒಳಗೊಂಡಿದೆ.
ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ.
ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವಪ್ರಕೃತಿಯ ವರ್ಣನೆ. ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಅವನ ಎಲ್ಲ ಪಾತ್ರಗಳು ಅವರವರದೇ ರೀತಿಯಲ್ಲಿ ಮಾತನಾಡುತ್ತಾರೆ, ಬೈಯುತ್ತಾರೆ, ನಗುತ್ತಾರೆ, ಹಾಗೂ ಅಳುತ್ತಾರೆ ಸಹ.
ಕುಮಾರವ್ಯಾಸ ಅಷ್ಟೇ ಆಳವಾದ ದೈವಭಕ್ತ ಸಹ. ಶ್ರೀ ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. ಅವನ ಮಹಾಭಾರತ ಕಥೆ ಕೃಷ್ಣನ ಸುತ್ತಲೂ ಸುತ್ತುತ್ತದೆ, ಕೃಷ್ಣನ ಅವಸಾನದ ನಂತರ ಕುಮಾರವ್ಯಾಸ ತನ್ನ ಕಾವ್ಯವನ್ನೇ ಮುಗಿಸಿದ್ದಾನೆ, ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತರ (ಗದಾಪರ್ವ) ನಂತರ.
ಕುಮಾರವ್ಯಾಸನ ಪ್ರತಿಭೆಗೆ ಕನ್ನಡಿಯಾಗಿ ಹಿಡಿದ ಕುವೆಂಪು ರವರ ಸಾಲುಗಳನ್ನು ನೋಡಿ:
"ಕುಮಾರ ವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿವುದು! ಮೈಯಲಿ
ಮಿಂಚಿನ ಹೊಳೆ ತುಳುಕಾಡುವುದು!"
ಕುಮಾರವ್ಯಾಸನ ಇನ್ನೊಂದು ಕೃತಿ ಐರಾವತ. ಇದು ಅಷ್ಟಾಗಿ ಪ್ರಸಿದ್ಧವಾಗಿಲ್ಲ. ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕುಮಾರವ್ಯಾಸ ಭಾರತವನ್ನು ಇಂದಿಗೂ ಸಹ ಕರ್ನಾಟಕದಲ್ಲಿ ಓದಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ. ಕುಮಾರವ್ಯಾಸ ಭಾರತವನ್ನು ಓದುವ ಒಂದು ವಿಶಿಷ್ಟ ಶೈಲಿಯಾದ ಗಮಕ ಕಲೆ ಸಾಕಷ್ಟು ಪ್ರಸಿದ್ಧವಾಗಿದೆ.
http://en.wikipedia.org/wiki/Kumara_Vyasa
ಕುಮಾರವ್ಯಾಸ ಕನ್ನಡದ ಮಹಾನ್ ಕವಿ ಈತನನ್ನು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಕರೆದರೆ ಇಥನ ಸಮಕಾಲಿನನಾದ ಲಕ್ಷ್ಮಿಶನನ್ನು ಉಪಮಲೂಲ ಎಂದು ಕರೆದಿದ್ದಾರೆ.. ಏಕೆಂದರೆ ಇಬ್ಬರು ಸಮಕಾಲೀನರು ಹಾಗು ಷಟ್ಪದಿಯಲ್ಲಿ ಎತ್ಹಿದಕೈ! ಕುಮಾರವ್ಯಾಸನನ್ನು ಕುರಿತು ಮಹಾಕವಿ ಕುವೆಂಪು ಹೀಗೆ ಹೇಳುತಾರೆ
ReplyDeleteಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿಯುವುದು ಕಲಿ ಕವಿಯಗುವನು ಕವಿ ಹುಚ್ಚಗುವನು ಎಂದು. ನಿಜಕ್ಕೂ ಈ ಭಾರತ ಕನ್ನಡ ಸಾರಸ್ವತ ಲೋಕದ ಅನರ್ಗ್ಯ ರತ್ನ. ಈ ಕವಿಯ ವರ್ಣನೆ ಮಾಡಿದ ನಮ್ಮ ರತ್ನ ಪೂರ್ಣ ಚಂದ್ರನಿಗೆ ಧನ್ಯವಾದಗಳು!
thanks for the review and info. very encouraging :)
ReplyDelete